ನವದೆಹಲಿ: ಪಶ್ಚಿಮ ಬಂಗಾಳದ ಇತ್ತೀಚಿನ ವಿಧಾನಸಭಾ ಚುನಾವಣೆ ನಡೆಸುವಲ್ಲಿ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ 'ಪದ್ಮಭೂಷಣ' ಪ್ರಶಸ್ತಿ ನೀಡಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 'ಪದ್ಮಭೂಷಣ ಎಂಬುದು ಬಹಳ ಸಣ್ಣ ವಿಷಯ. ಅವರನ್ನು ಪ್ರಧಾನಿಯನ್ನಾಗಿ ಮಾಡಿ. ಏಕೆಂದರೆ, ಇತರರನ್ನು ಪ್ರಧಾನಿಯನ್ನಾಗಿ ಮಾಡುವ ಸಾಮರ್ಥ್ಯವಿರುವ ವ್ಯಕ್ತಿಯೇ ಸ್ವತಃ ಪ್ರಧಾನಿಯಾಗಬೇಕು' ಎಂದು ಹೇಳಿದರು.
ಭಟ್ಟಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖೇರಾ, 'ಪದ್ಮಭೂಷಣ ಎಂಬುದು ಬಹಳ ಸಣ್ಣ ವಿಷಯ. ಅವರನ್ನು ಪ್ರಧಾನಿಯನ್ನಾಗಿ ಮಾಡಿ. ಏಕೆಂದರೆ, ಇತರರನ್ನು ಪ್ರಧಾನಿಯನ್ನಾಗಿ ಮಾಡುವ ಸಾಮರ್ಥ್ಯವಿರುವ ವ್ಯಕ್ತಿಯೇ ಸ್ವತಃ ಪ್ರಧಾನಿಯಾಗಲು ಅರ್ಹರು' ಎಂದು ಹೇಳಿದರು.
ಇದಕ್ಕೂ ಮುನ್ನ, ಉತ್ತರ 24 ಪರಗಣ ಜಿಲ್ಲೆಯ ಪನಿಹಾಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಭಟ್ಟಾಚಾರ್ಯ ಮುಖ್ಯ ಚುನಾವಣಾ ಆಯುಕ್ತರನ್ನು (CEC) ಶ್ಲಾಘಿಸಿದ್ದರು. ಸಿಇಸಿ 'ಕನಿಷ್ಠಪಕ್ಷ' ಪದ್ಮಭೂಷಣ ಪ್ರಶಸ್ತಿಗೆಯಾದರೂ ಅರ್ಹರು. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಕ್ತ ಚುನಾವಣೆ ನಡೆಯುವಂತೆ ನೋಡಿಕೊಂಡಿದ್ದಕ್ಕಾಗಿ ಹಾಗೂ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಪಟ್ಟಿಯನ್ನು 'ಶುದ್ಧೀಕರಿಸಿದ್ದಕ್ಕಾಗಿ' ಜ್ಞಾನೇಶ್ ಕುಮಾರ್ ಅವರನ್ನು ಪ್ರಶಂಸಿಸಿದ್ದರು.
'ಜ್ಞಾನೇಶ್ ಕುಮಾರ್ ಅವರಿಗೆ ಕನಿಷ್ಠಪಕ್ಷ 'ಪದ್ಮಭೂಷಣ' ಪ್ರಶಸ್ತಿಯನ್ನಾದರೂ ನೀಡಬೇಕು. ದೀರ್ಘಕಾಲದ ನಂತರ ಬೆದರಿಕೆ ತಂತ್ರಗಳಿಗೆ ಕಡಿವಾಣ ಬಿದ್ದಿರುವುದು, ಚುನಾವಣೆ ವೇಳೆ ಯಾವುದೇ ಹತ್ಯೆಗಳು ನಡೆಯದಿರುವುದು ಹಾಗೂ ಜನರು ತಮ್ಮ ಮತ ಚಲಾಯಿಸಲು ನಿಜವಾಗಿಯೂ ಅವಕಾಶ ಸಿಕ್ಕಿರುವುದು ಪಶ್ಚಿಮ ಬಂಗಾಳದ ಜನರಿಗೆ ಸಂತಸ ತಂದಿದೆ' ಎಂದು ಬಿಜೆಪಿ ನಾಯಕ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು ಎಂದ ಅವರು, 'ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯದಲ್ಲಿ, ಮತದಾರರ ಪಟ್ಟಿಯಿಂದ ಬಾಂಗ್ಲಾದೇಶಿ ಒಳನುಸುಳುಕೋರರ ಹೆಸರುಗಳನ್ನು ತೆಗೆದುಹಾಕಲು ಜ್ಞಾನೇಶ್ ಕುಮಾರ್ ಅವರು ಮುಂದಾಗಿದ್ದರು' ಎಂದು ಭಟ್ಟಾಚಾರ್ಯ ಹೇಳಿದರು.
'ಪಶ್ಚಿಮ ಬಂಗಾಳದ ಜನರು ಇಂತಹ ಚುನಾವಣೆಯನ್ನು ಅಪರೂಪಕ್ಕೆ ಕಂಡಿದ್ದಾರೆ. ಆದ್ದರಿಂದ, ಅಲ್ಲಿನ ಸಾರ್ವಜನಿಕರು ಜ್ಞಾನೇಶ್ ಕುಮಾರ್ ಅವರಿಗೆ ಕೃತಜ್ಞರಾಗಿದ್ದಾರೆ ಮತ್ತು ಅವರಿಗೆ ತಮ್ಮ ಪೂರ್ಣ ಹೃದಯದಿಂದ ಆಶೀರ್ವದಿಸಿದ್ದಾರೆ' ಎಂದು ಅವರು ಹೇಳಿದರು.
ಮತದಾರರ ಪಟ್ಟಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಾದವೊಂದು ಉಲ್ಬಣಿಸುತ್ತಿರುವ ನಡುವೆಯೇ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ. ತಮ್ಮ ಒಪ್ಪಿಗೆಯಿಲ್ಲದೆಯೇ ತಮ್ಮ ಹೆಸರಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ತಿಳಿಸಿದೆ. ಇದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿದೆ.
ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಿದೆ; ಅದೇ ವೇಳೆ, ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತರು (CEC) ಕೈಗೊಂಡಿದ್ದಾರೆ ಎನ್ನಲಾದ ಸಾಫ್ಟ್‌ವೇರ್ ಬದಲಾವಣೆಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ.
ಇದು ರಾಹುಲ್ ಗಾಂಧಿ ಅವರಿಂದಲೂ ಟೀಕೆಗೆ ಗುರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕುಮಾರ್ ಅವರನ್ನು "ದೇಶದ್ರೋಹಿಗಳು" ಎಂದು ಕರೆದಿದ್ದಲ್ಲದೆ, ಚುನಾವಣೆಗಳಲ್ಲಿ ಅಕ್ರಮ ಎಸಗುವ ಮೂಲಕ ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಭಟ್ಟಾಚಾರ್ಯ, 'ಕಾಂಗ್ರೆಸ್ ಪಕ್ಷವೇ ಅವರ ಮಾತಿಗೆ ಗಮನ ಕೊಡುವುದಿಲ್ಲ. ಅವರ ಸ್ವಂತ ಪಕ್ಷವೇ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಇನ್ನು ನೀವು ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುತ್ತಿದ್ದೀರಿ' ಎಂದು ಹೇಳಿದರು.
