ನಾಳೆ 'ಉಚ್ಚಿಲ ಮಹಿಳಾ ದಸರಾ' ಉದ್ಘಾಟಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಉಡುಪಿ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅ.15ರ ಸಂಜೆ ಉಡುಪಿಯ ಉಚ್ಚಿಲ ಹಾಗೂ ಮಂಗಳೂರಿನ ಕುದ್ರೋಳಿಯಲ್ಲಿ ನಡೆಯುತ್ತಿರುವ ದಸರಾ-ನವರಾತ್ರಿ ಮಹೋತ್ಸವಗಳಲ್ಲಿ ಭಾಗವಹಿಸಲು ಕರಾವಳಿಗೆ ಆಗಮಿಸಲಿದ್ದಾರೆ.

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಗುರುವಾರ ಮಧ್ಯಾಹ್ನ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಅಲ್ಲಿಂದ ರಸ್ತೆ ಮಾರ್ಗವಾಗಿ ಮಧ್ಯಾಹ್ನ 3 ಗಂಟೆಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಹಿಳಾ ದಸರಾ ಉದ್ಘಾಟಿಸಿ, ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.

ಈ ಸಂದರ್ಭ ಮುಖ್ಯಮಂತ್ರಿಯವರನ್ನು ದೇವಳದ ವತಿಯಿಂದ ಅಭಿನಂದಿಸಲಾಗುವುದು.  ಇದೆ ವೇಳೆ ಉಡುಪಿ ಮತ್ತು ದ.ಕ. ಜಿಲ್ಲೆಯ ಮೀನುಗಾರಿಕಾ ಬಂದರು ಹಾಗೂ ಮೀನುಗಾರರ ಮಹಿಳಾ ಸಮಸ್ಯೆಗಳ

ಕುರಿತು ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗುವುದು ಎಂದು ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಹಾಗೂ ಅಧ್ಯಕ್ಷ ಜಯ ಸಿ ಕೋಟ್ಯಾನ್ ತಿಳಿಸಿದ್ದಾರೆ. 

ಸಂಜೆ 6 ಗಂಟೆಗೆ ರಸ್ತೆ ಮಾರ್ಗವಾಗಿ ಉಚ್ಚಿಲದಿಂದ ಮಂಗಳೂರಿನ ಕುದ್ರೋಳಿಗೆ ತೆರಳುವ ಡಿ.ಕೆ.ಶಿವಕುಮಾರ್, ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಿರುವ ಮಂಗಳೂರು ದಸರಾ 2026- ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ರಾತ್ರಿ 8 ಗಂಟೆಗೆ ರಸ್ತೆ ಮಾರ್ಗವಾಗಿ ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುವರು.