ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ 14 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ, ಸೌಜನ್ಯಳ 14ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಬೆಳ್ತಂಗಡಿಯಲ್ಲಿ ಸೌಜನ್ಯಪರ ಹೋರಾಟಗಾರರು ಆಯೋಜಿಸಿದ್ದ ‘ನ್ಯಾಯದ ನಡಿಗೆ’ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿಯಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೂ ಮೊದಲು ಉಜಿರೆಯಿಂದ ಬೃಹತ್ ಮೌನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಬೆಳ್ತಂಗಡಿಯ ಅಂಬೇಡ್ಕರ್ ಮೈದಾನದಲ್ಲಿ ನಡೆದ ಅಭಿನಂದನಾ ಸಮಾವೇಶವನ್ನು ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಉದ್ಘಾಟಿಸಿದರು.
ಸೌಜನ್ಯಳ ಹೆತ್ತವರ ಬೆಂಬಲವಾಗಿ ನಿಂತು ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಉಚಿತವಾಗಿ ವಾದ ಮಂಡಿಸಿದ ನ್ಯಾಯವಾದಿಗಳು, ಹೋರಾಟವನ್ನು ಜೀವಂತವಾಗಿರಿಸಿದ ಮಾಧ್ಯಮ ಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
ಮಹೇಶ್ ಶೆಟ್ಟಿ ತಿಮರೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಿರೀಶ್ ಮಟ್ಟಣವರ್, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಜಯಂತ್ ಟಿ., ದಿನೇಶ್ ಗಾಣಿಗ, ಹೈಕೋರ್ಟ್ ನ್ಯಾಯವಾದಿಗಳಾದ ಮೋಹಿತ್ ಕುಮಾರ್, ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ಕೃಷ್ಣಪ್ಪ ಗೌಡ ದೇವಸ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ನ್ಯಾಯದ ನಡಿಗೆ’ ಹಾಗೂ ಅಭಿನಂದನಾ ಸಭೆಯಲ್ಲಿ ಸಾವಿರಾರು ಸೌಜನ್ಯಪರ ಹೋರಾಟಗಾರರು ಭಾಗವಹಿಸಿದ್ದರು.
