ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಲಿರುವ ಕಾಂಗ್ರೆಸ್; BJP -JDSಗೆ ಎಷ್ಟು ಸ್ಥಾನ ಸಿಗಲಿದೆ: ಸಮೀಕ್ಷೆ ನುಡಿದ ಭವಿಷ್ಯವೇನು...?

ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಲಿರುವ ಕಾಂಗ್ರೆಸ್; BJP -JDSಗೆ ಎಷ್ಟು ಸ್ಥಾನ ಸಿಗಲಿದೆ: ಸಮೀಕ್ಷೆ ನುಡಿದ ಭವಿಷ್ಯವೇನು...?


ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 108 ರಿಂದ 114 ಸ್ಥಾನಗಳನ್ನು ಗೆಲ್ಲಲಿದ್ದು, ಆಡಳಿತಾರೂಢ BJP 65 ರಿಂದ 75 ಹಾಗು JDS 24 ರಿಂದ 34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೊರರಾಜ್ಯಗಳ ಸ್ವತಂತ್ರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ.

2022 ರಿಂದ ನವೆಂಬರ್ 20 ರಿಂದ 2023 ಜನವರಿ 15 ರವರೆಗೆ ರಾಜ್ಯದಲ್ಲಿ IPSS ತಂಡದ ಸಹಯೋಗದೊಂದಿಗೆ ಹೈದರಾಬಾದ್‌ನ SAS ಗುಂಪು ನಡೆಸಿದ ಸಮೀಕ್ಷೆಯಲ್ಲಿ ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನ ಗಳಿಸಿವೆ ಎಂಬುದನ್ನು ತಿಳಿಸಲಾಗಿದೆ.

ಈ ಬಾರಿ ಕಾಂಗ್ರೆಸ್ ತನ್ನ ಮತಗಳನ್ನು ಶೇ 38.14 ರಿಂದ ಶೇ 40ಕ್ಕೆ (ಶೇ 1.86ರಷ್ಟು) ಹೆಚ್ಚಿಸಿಕೊಳ್ಳಬಹುದು, BJPಯು ತನ್ನ ಮತಗಳಿಕೆಯಲ್ಲಿ ಶೇ 36.35 ರಿಂದ ಶೇ 34 ಕ್ಕೆ (ಶೇ 2.35ರಷ್ಟು) ಕುಸಿತವನ್ನು ಕಾಣಲಿದ್ದು, JDS ಕೂಡ 1.3 ಪರ್ಸೆಂಟ್ ಇಳಿಕೆಯೊಂದಿಗೆ 18.3 ಪರ್ಸೆಂಟ್ ನಿಂದ 17 ಪರ್ಸೆಂಟ್‌ ಮತಗಳಿಕೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಇದೆ ವೇಳೆ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇ 6 ರಷ್ಟು ಮತ ಗಳಿಸಬಹುದು, ಜೊತೆಗೆ ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರದಲ್ಲಿ 13 ರಿಂದ 14 ಮಂದಿ ಕಾಂಗ್ರೆಸ್ ಶಾಸಕರು ಹಾಗೂ BJPಯಿಂದ ಕೇವಲ 9 ರಿಂದ 10 ಮಂದಿ ಸದಸ್ಯರು ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ BJP ಭಾರಿ ಕಸರತ್ತು ನಡೆಸುತ್ತಿದ್ದು, ಕೇವಲ 10-14 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಬಹುದು. ಈ ಭಾಗದಲ್ಲಿ ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು. JDS 21 ರಿಂದ 22 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯದ ಬೆಳಗಾವಿ ಅಥವಾ ಕಿತ್ತೂರು ಕರ್ನಾಟಕ ಭಾಗದಲ್ಲಿ 27 ರಿಂದ 28 ಸ್ಥಾನವನ್ನು ಕಾಂಗ್ರೆಸ್ ಪಡೆದರೆ, ಬಿಜೆಪಿ 14 ರಿಂದ 16 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ಭಾಗದಲ್ಲಿ ಕೇಸರಿ ಪಾಳಯ 12 ರಿಂದ 13 ಸ್ಥಾನ ಗೆಲ್ಲಬಹುದು. ಇದೇ ಭಾಗದಲ್ಲಿ ಕಾಂಗ್ರೆಸ್ ಏಳರಿಂದ ಎಂಟು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೇ ಎಂದು ಸಮೀಕ್ಷೆ ಹೇಳಿದೆ.

ಹೈದರಾಬಾದ್-ಕರ್ನಾಟಕದಲ್ಲಿ  BJP 12 ರಿಂದ 14 ಸ್ಥಾನಗಳನ್ನು ಪಡೆ್ದರೆ, ಕಾಂಗ್ರೆಸ್ 21 ರಿಂದ 22 ಸ್ಥಾನಗಳನ್ನು ಪಡೆಯಬಹುದು. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16 ರಿಂದ 17 ಸ್ಥಾನಗಳನ್ನು ಹಾಗು BJP ಕೇವಲ 8 ರಿಂದ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. 

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿರುವುದರಿಂದ ಈ ಬಾರಿ ಮತದಾರರು ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಈ ಬಾರಿ ಕಾಂಗ್ರೆಸ್ಸಿಗೆ ಹಿಂದುಳಿದ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಗರಿಷ್ಠ ಬೆಂಬಲ ಸಿಗಲಿದ್ದು,  ಒಕ್ಕಲಿಗರು ಶೇ 50 ರಷ್ಟು JDS, 38 ಪ್ರತಿಶತ ಕಾಂಗ್ರೆಸ್ ಮತ್ತು 10 ಪ್ರತಿಶತ BJPಯನ್ನು ಬೆಂಬಲಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

Ads on article

Advertise in articles 1

advertising articles 2

Advertise under the article