
ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು..?
ಬೆಂಗಳೂರು: ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದಿರುವ ಆರೋಪ ಎದುರಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಗರಂ ಆಗಿದ್ದು, ನಾನು ಏನು ಹೇಳುವ ಅಗತ್ಯವಿಲ್ಲ ಎಂದು ಜಾರಿ ಕೊಂಡಿದ್ದಾರೆ.
ಇತ್ತೀಚಿಗೆ ಇಂಡಿಗೊ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದು ಜನರ ಜೀವನದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ನಾಯಕರು, ನೆಟ್ಟಿಗರು ಕಿಡಿಕಾರಿದ್ದರು.
ಈ ಘಟನೆ ಬೆಳಕಿಗೆ ಬಂದ ಬಳಿಕ ಸಂಸದ ತೇಜಸ್ವಿ ಸೂರ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗುವ ಜೊತೆಗೆ ಪ್ರತಿಪಕ್ಷ ಕಾಂಗ್ರೆಸ್ ತೇಜಸ್ವಿ ಸೂರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಈ ಬಗ್ಗೆ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದವರಂತೆ ಕಂಡ ತೇಜಸ್ವಿ ಸೂರ್ಯ, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದ ಬಗ್ಗೆ ಮಾತನಾಡದೆ ಹಾರಿಕೆಯ ಉತ್ತರ ನೀಡಿ ಜಾರಿ ಕೊಂಡ ಘಟನೆ ನಡೆಯಿತು.
ತೇಜಸ್ವಿ ಸೂರ್ಯ ಹೇಳಿದ್ದು ಹೀಗೆ...
ಈ ವಿಷಯದ ಬಗ್ಗೆ ಈಗಾಗಲೇ ಏರ್ಲೈನ್ಸ್ ಅವರು, ಡಿಜಿಸಿ ಅವರು, ವಿಮಾನಯಾನ ಸಚಿವರು, ಅಣ್ಣಾಮಲೈ ಹಾಗು ಅಲ್ಲಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಅಲ್ಲಿ ಏನು ನಡೆದಿದೆ ಎಂಬುದನ್ನು ಮಾತನಾಡಿದ್ದಾರೆ. ಕಾಂಗ್ರೆಸ್ಸಿನವರ, ಇನ್ನ್ಯಾರೋ ಕೇಳಿದ್ರು ಅನ್ನೋ ಕಾರಣಕ್ಕೆ ಪದೇ ಪದೇ ಅದನ್ನೇ ಮಾತನಾಡಿ, ನಮ್ಮ ಸಮಯ, ನಿಮ್ಮ ಸಮಯ ಯಾರ ಸಮಯವನ್ನು ಹಾಳು ಮಾಡಲು ನಾನು ಇಚ್ಛೆ ಪಡುದಿಲ್ಲ, ಈಗಾಗಲೇ ಯಾರ್ಯಾರು ಸೂಕ್ತವಾದಂಥ ವ್ಯಕ್ತಿಗಳು ಸ್ಪಷ್ಟೀಕರಣ ಕೊಡಬೇಕಿದೆ, ವಿಷಯ ತಿಳಿಸಬೇಕಿದೆ, ಸತ್ಯ ಹೇಳಬೇಕಿದೆ ಅದನ್ನೆಲ್ಲ ಅವರು ಈಗ ಮಾತನಾಡಿದ್ದಾರೆ, ಅದನ್ನೇ ತಾವು ಮತ್ತೊಮ್ಮೆ ನೋಡಬಹುದು ಎಂದು ಹೇಳಿ ಜಾರಿಕೊಂಡರು.