H3N2 ಸೋಂಕು ಪ್ರಕರಣ: ಈ ವೈರಸ್ ಆತಂಕಕಾರಿಯಲ್ಲ ಎಂದ ಆರೋಗ್ಯ ಸಚಿವ ಡಾ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ 26 ಮಂದಿಯಲ್ಲಿ H3N2 ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ವೈರಸ್ ಆತಂಕಕಾರಿಯಲ್ಲ, ಕರ್ತವ್ಯ ವೇಳೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ H3N2 ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದರು.
H3N2 ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗು ಗರ್ಭಿಣಿಯರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಅನವಶ್ಯಕವಾಗಿ ಗುಂಪು ಸೇರದಂತೆ, ಶುಚಿತ್ವದ ಕಡೆ ಗಮನ ಹರಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಸಕ್ತ ಹೆಚ್ಚುತ್ತಿರುವ ಬಿಸಿಗಾಳಿ ಹಾಗು ತಾಪಮಾನ ಹೆಚ್ಚಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿ ದಿನ 2ರಿಂದ 3 ಲೀಟರ್ ನೀರು ಸೇವಿಸುವ ಮೂಲಕ ದೇಹದಲ್ಲಿ ನೀರಿನ ಕೊರತೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಜೊತೆಗೆ ಬಿಸಲು ಹೆಚ್ಚುತ್ತಿರುವುದರಿಂದ ಮಜ್ಜಿಗೆ, ಎಳನೀರು, ನಿಂಬೆ ಹಣ್ಣಿನ ರಸ ಸೇವಿಸುವಂತೆಯೂ ಜನರಿಗೆ ಸಲಹೆ ನೀಡಲಾಗಿದೆ ಎಂದರು.