ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ.ನಗದು, ಚಿನ್ನಾಭರಣ ಪತ್ತೆ
Monday, April 24, 2023
ಬೆಂಗಳೂರು: ಬೆಂಗಳೂರು ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅವರ ನಿವಾಸ, ಕಚೇರಿ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇರೆಗೆ ಗಂಗಾಧರಯ್ಯ ಅವರ ಯಲಹಂಕದಲ್ಲಿರುವ ಕಚೇರಿ, ಮಹಾಲಕ್ಷ್ಮಿ ಲೇಔಟ್ನಲ್ಲಿನ ಸಂಬಂಧಿಗಳ ನಿವಾಸ ಹಾಗೂ ಕುರುಬರಹಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 1.5 ಕೋಟಿ ಹಣ, ವಿದೇಶಿ ಕರೆನ್ಸಿ, 2 ಕೋಟಿ ರೂ.ಗಳಿಗೂ ಹೆಚ್ಚಿನ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಎಸ್ಪಿ ಅಶೋಕ್ ನೇತೃತ್ವದಲ್ಲಿ ನಡೆಸಲಾದ ಈ ದಾಳಿಯಲ್ಲಿ ಅಂದಾಜು ಮೊತ್ತ 1.5 ಕೋಟಿ ರೂಪಾಯಿ ನಗದು, 2 ಕೋಟಿ ರೂ.ಗಳಿಗೂ ಹೆಚ್ಚಿನ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.