ಈ ಬಾರಿ ಬಿಜೆಪಿಗೆ ಬಹುಮತ ನೀಡಿ, ಕರ್ನಾಟಕಕ್ಕೆ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ: ರಾಜ್ಯದ ಜನತೆಗೆ ಮೋದಿ ಕರೆ

ಈ ಬಾರಿ ಬಿಜೆಪಿಗೆ ಬಹುಮತ ನೀಡಿ, ಕರ್ನಾಟಕಕ್ಕೆ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ: ರಾಜ್ಯದ ಜನತೆಗೆ ಮೋದಿ ಕರೆ

 


ಮುಲ್ಕಿ: ಕಳೆದ ಬಾರಿಗಿಂತಲೂ ಈ ಬಾರಿ  ಬಿಜೆಪಿಗೆ ಬಹುಮತ ನೀಡುವ ಮೂಲಕ ಕರ್ನಾಟಕಕ್ಕೆ ಅಭಿವೃದ್ಧಿಪರ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.

ಬುಧವಾರ ಮುಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಬಜರಂಗಬಲಿ ಕೀ ಜೈ ಘೋಷಣೆ ಕೂಗಿ, ತುಳುವಿನಲ್ಲಿ ಮಾತನ್ನು ಆರಂಭಿಸಿದರು.  ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು (ಪರಶುರಾಮ ಕ್ಷೇತ್ರದ ತಾಯಿಯ ಪ್ರೀತಿಯ ಮಕ್ಕಳಿಗೆ ನಮಸ್ಕಾರಗಳು) ಎಂದು ಹೇಳಿ ಭಾಷಣಕ್ಕೆ ಚಾಲನೆ ನೀಡಿದರು.

ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ ಪ್ರಗತಿಯೇನು ಆಗಿಲ್ಲ, ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶ ಆಗುವುದು ಖಂಡಿತ. ತುಷ್ಟೀಕರಣ ರಾಜಕಾರಣ ಕಾಂಗ್ರೆಸ್‌ನ ಏಕೈಕ ನೀತಿಯಾಗಿದೆ. ರಾಜಸ್ಥಾನದಲ್ಲಿ ವರ್ಷಗಳ ಹಿಂದೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯ ಎಲ್ಲಾ ಅಪರಾಧಿಗಳನ್ನು ಆರೋಪ ಮುಕ್ತಗೊಳಿಸಲಾಯಿತು, ಕಾಂಗ್ರೆಸ್ ಶಾಂತಿಯ ವಿರೋಧಿ, ಕಾಂಗ್ರೆಸ್ ಅಭಿವೃದ್ಧಿಯ ವಿರೋಧಿ ಕಾಂಗ್ರೆಸ್ ಆತಂಕವಾದಿಗಳ ರಕ್ಷಣೆಗೆ ನಿಲ್ಲುತ್ತದೆ, ಕೇವಲ ತುಷ್ಟೀಕರಣ ಮಾಡುತ್ತದೆ. ಎಂದು ಆರೋಪಿಸಿದರು.

ಕರ್ನಾಟಕದ ಮೊದಲ ಬಾರಿಗೆ ಮತದಾರರು ತಮ್ಮ ಭವಿಷ್ಯವನ್ನು ಮಾತ್ರವಲ್ಲದೆ ಇಡೀ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವವರು ಆಗಿರುತ್ತಾರೆ. ಅವರು ಸ್ವಾತಂತ್ರ್ಯ ಮತ್ತು ಸ್ಥಿರತೆಯ ಜೀವನವನ್ನು ನಡೆಸಬೇಕಾದರೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ಬರಲು ಬಿಡಬಾರದು. ಡೆಲ್ಲಿಯಲ್ಲಿ ಕುಳಿತ ಒಂದು ಕುಟುಂಬ ಕರ್ನಾಟಕವನ್ನು ನಂ.1 ಎಟಿಎಂ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ನವರು ಮತ ಕೇಳುತ್ತಿದ್ದಾರೆ. ಕರ್ನಾಟಕದ ಜನರು ಮತ ಹಾಕುವ ಮುನ್ನ ಯೋಚನೆ ಮಾಡಬೇಕು ಎಂದರು.

ಪ್ರತಿ ಯೋಜನೆಯಲ್ಲಿ 85% ಕಮಿಷನ್ ಪಡೆಯುವ ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಮೋದಿ, ಮತದಾನದ ದಿನ ದೂರವಿಲ್ಲ. ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುತ್ತೇವೆ. ಇದು ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕಕ್ಕೆ ಮೂಲಸೌಕರ್ಯ ಒದಗಿಸುವ ಮೂಲಕ ಸೂಪರ್‌ಪವರ್‌ ರಾಜ್ಯವನ್ನಾಗಿ ಮಾಡಲಾಗುವುದು ಎಂದರು.

ರಾಣಿ ಅಬ್ಬಕ್ಕ ರೀತಿಯ ನಮ್ಮ ಮಹಿಳೆಯರಲ್ಲೂ ಸಾಮರ್ಥ್ಯ ಇದೆ. ಕಾಂಗ್ರೆಸ್​ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಮಹಿಳೆಯರಿಗಾಗಿ ಶೌಚಾಲಯ ಇರಲಿಲ್ಲ, ಓದಲು ಶಾಲೆಗಳಿರಲಿಲ್ಲ. ಗ್ಯಾಸ್​ ಕೊರತೆ ಇತ್ತು. ಆದರೆ  ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ವಿಶ್ವದಲ್ಲೇ ಭಾರತದ ಕೀರ್ತಿ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಿದೆ. ಭಾರತದ ಗೌರವ ಜಗತ್ತಿನಾದ್ಯಂತ ಹೆಚ್ಚಿದ್ದು ನಿಮ್ಮ ಮತದಾನದಿಂದ. ನಿಮ್ಮ ಮತದಿಂದ ದೆಹಲಿಯಲ್ಲಿ ಸ್ಥಿರವಾದ ಸರ್ಕಾರ ನಿರ್ಮಾಣವಾಗಿದೆ. ಹೀಗೆ ಕರ್ನಾಟಕದ ಕೀರ್ತಿ ಹೆಚ್ಚಬೇಕಾದರೇ, ದೇಶದ ವಿವಿಧ ರಾಜ್ಯಗಳಲ್ಲಿ ಕರ್ನಾಟಕದ ಜೈಕಾರ ಆಗಬೇಕೆಂದರೇ ಬಿಜೆಪಿಗೆ ಮತ ಹಾಕಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕರೆ ನೀಡಿದರು.

ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ನಂಬರ್​ ಒನ್​ ಸ್ಥಾನದಲ್ಲಿದೆ. ಹಾಗೇ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲಿ ನಂಬರ್​ ಒನ್​ ಮಾಡೋಣ. ರಾಜ್ಯವನ್ನು ವಿಕಾಸ ಕ್ಷೇತ್ರದಲ್ಲಿ ನಂಬರ್​ ಒನ್​ ಮಾಡೋಣ. ಆದರೆ ಕಾಂಗ್ರೆಸ್​ಗೆ ಏನು ಬೇಕಾಗಿದೆ. ಕಾಂಗ್ರೆಸ್​ಗೆ ರಾಜ್ಯವನ್ನು ಎಟಿಎಂ ಮಾಡಬೇಕೆಂದಿದೆ. ಜೆಡಿಎಸ್​ ಕೂಡ ಕಚ್ಚೆ-ಪಂಚೆ ಪಕ್ಷವಾಗಿದೆ ಎಂದು ಮೋದಿ ಟೀಕಿಸಿದರು.

ಸಮಾರಂಭದ ವೇದಿಕೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸರ್ಕಾರದ ಸಚಿವೆ ಸಂಸದೆ ಶೋಬಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಪ್ರತಾಪ್ ಸಿಂಹ ನಾಯಕ್ , ಕಾಪು ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟೆಹೊಳೆ,  ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಹಾಗೂ ಉಭಯ ಜಿಲ್ಲೆ ಗಳ 13 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಭಾಗೀರಥಿ ಸುಳ್ಯ, ಆಶಾ ತಿಮ್ಮಪ್ಪ ಪುತ್ತೂರು, ಸತೀಶ್ ಕುಂಪಲ ಮಂಗಳೂರು, ಯಶ್ಫಾಲ್ ಸುವರ್ಣ, ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article