ಉಡುಪಿ ಮಾಜಿ ಶಾಸಕ,‌ ಹಿರಿಯ ರಾಜಕಾರಣಿ ಯು.ಆರ್.ಸಭಾಪತಿ‌ ನಿಧನ

ಉಡುಪಿ ಮಾಜಿ ಶಾಸಕ,‌ ಹಿರಿಯ ರಾಜಕಾರಣಿ ಯು.ಆರ್.ಸಭಾಪತಿ‌ ನಿಧನ

ಉಡುಪಿ:  ಉಡುಪಿ ಮಾಜಿ ಶಾಸಕ,‌ ಹಿರಿಯ ರಾಜಕಾರಣಿ ಯು.ಆರ್. ಸಭಾಪತಿ‌(71) ರವಿವಾರ ಬೆಳಗ್ಗೆ ನಿಧನರಾದರು.

ಉಡುಪಿ ಬಡಗುಪೇಟೆ ನಿವಾಸಿಯಾಗಿದ್ದ ಅವರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದು, ಅಲ್ಪಕಾಲದ ಅಸೌಖ್ಯದಿಂದ ಬೆಳಗ್ಗೆ ನಿಧನರಾದರು.

1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ನ ಉದ್ಯಾವರ ಕ್ಷೇತ್ರದ ಸದಸ್ಯ ರಾಗಿದ್ದ ಇವರು, ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡರು. 1994ರಲ್ಲಿ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕ ರಾಗಿ ವಿಧಾನಸಭೆ ಪ್ರವೇಶಿಸಿದರು.

1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಯಾದರು. 2004ರ ಚುನಾವಣೆಯಲ್ಲಿ ಇವರು ರಘುಪತಿ ಭಟ್ ವಿರುದ್ಧ ಪರಾಜಯಗೊಂಡರು. ಅಲ್ಲದೆ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article