ಮದುವೆಗಾಗಿ ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನು ಬರ್ಬರವಾಗಿ ಕೊಂದು ಚರಂಡಿ ಗುಂಡಿಗೆ ಎಸೆದ ಅರ್ಚಕ; ಮುಂದೆ ಏನಾಯಿತು ನೋಡಿ...
ಹೈದರಾಬಾದ್: ಮನೆಯಲ್ಲೊಬ್ಬಳು ಮಡದಿ ಇದ್ದರೂ ಲವ್ವರ್ ಇರಬೇಕು ಎಂಬ ಅರ್ಚಕನೊಬ್ಬನ ಶೋಕಿಗಾಗಿ ತೆಲಂಗಾಣದಲ್ಲಿ 30 ವರ್ಷದ ಮಹಿಳೆಯೊಬ್ಬರ ಜೀವವೇ ಬಲಿಯಾಗಿದೆ. ಹೌದು, ಶಂಷಾಬಾದ್ ಜಿಲ್ಲೆಯ ಸರೂರ್‌ನಗರದಲ್ಲಿ ಅರ್ಚಕನು ತನ್ನ ಗರ್ಲ್‌ಫ್ರೆಂಡ್‌ಅನ್ನು ಮದುವೆಯಾಗಬೇಕಾಗುತ್ತದೆ ಎಂದು ಆಕೆಯನ್ನು ಕೊಂದು, ದೇಹವನ್ನು ಚರಂಡಿ ಗುಂಡಿಗೆ ಎಸೆದಿದ್ದಾನೆ.
ಸರೂರ್ ನಗರದ ದೇವಾಲಯದಲ್ಲಿ ಅರ್ಚಕನಾಗಿರುವ ವೆಂಕಟ ಸೂರ್ಯ ಸಾಯಿ ಕೃಷ್ಣನಿಗೆ ಈಗಾಗಲೇ ಮದುವೆಯಾಗಿದೆ. ಮದುವೆ, ಸಂಸಾರ ಎಂದು ಸುಮ್ಮನಿರದ ಈತನು ಅಪ್ಸರಾ ಎಂಬ ಮಹಿಳೆಯ ಜತೆ ಸಂಬಂಧ ಬೆಳೆಸಿದ್ದಾನೆ. ಇಬ್ಬರ ಪ್ರೀತಿ ಗಾಢವಾದ ಮೇಲೆ ನನ್ನನ್ನು ಮದುವೆಯಾಗು ಎಂದು ಅಪ್ಸರಾ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮದುವೆಯಾದ ಕಾರಣ ಮತ್ತೊಂದು ಮದುವೆಯಾಗಲು ಒಪ್ಪದ ವೆಂಕಟಸೂರ್ಯ ಸಾಯಿ ಕೃಷ್ಣ, ಆಕೆಯನ್ನು ಕೊಂದು, ಚರಂಡಿಯ ಗುಂಡಿಯಲ್ಲಿ ಎಸೆದಿದ್ದಾನೆ.
ಗೋಶಾಲೆಗೆ ಭೇಟಿ ನೀಡೋಣ ಎಂದು ವೆಂಕಟಸೂರ್ಯ ಸಾಯಿ ಕೃಷ್ಣ,ನು ಅಪ್ಸರಾ ಅವರನ್ನು ಕರೆಸಿದ್ದಾನೆ. ವೆಂಕಟೇಶ್ವರ ಕಾಲೋನಿ ನಿವಾಸಿಯಾದ ಅಪ್ಸರಾ, ವೆಂಕಟಸೂರ್ಯ ಸಾಯಿ ಕೃಷ್ಣನ ಮಾತು ಕೇಳಿ ಸುಲ್ತಾನ್‌ಪಳ್ಳಿಯಲ್ಲಿರುವ ಗೋಶಾಲೆಗೆ ಹೋಗಿದ್ದಾರೆ. ಇದೇ ವೇಳೆ, ನರ್ಕುಡಾ ಗ್ರಾಮದ ಹೊರವಲಯದಲ್ಲಿ ವೆಂಕಟಸೂರ್ಯ ಸಾಯಿ ಕೃಷ್ಣನು ಅಪ್ಸರಾ ತಲೆಮೇಲೆ ಬಂಡೆಗಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಚರಂಡಿ ಗುಂಡಿಯಲ್ಲಿ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜೂನ್ 3ರಿಂದ ಅಪ್ಸರಾ ಕಾಣೆಯಾದ ಕಾರಣ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಅಪ್ಸರಾ ಕಾಲ್ ರೆಕಾರ್ಡ್ಸ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವೆಂಕಟಸೂರ್ಯ ಸಾಯಿ ಕೃಷ್ಣನನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಅರ್ಚಕನು ತಾನು ನಡೆಸಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮದುವೆಯಾಗು ಎಂಬುದಾಗಿ ಅಪ್ಸರಾ ಪೀಡಿಸಿದ ಕಾರಣ ಕೊಲೆ ಮಾಡಿದೆ ಎಂಬುದಾಗಿ ವೆಂಕಟಸೂರ್ಯ ಸಾಯಿ ಕೃಷ್ಣ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನು ಚರಂಡಿಯಲ್ಲಿ ಬಿದ್ದಿರುವ ಶವವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಮಹಿಳೆಯೊಬ್ಬರು ಕಾಣೆಯಾದ ಪ್ರಕರಣವು ಆಕೆಯ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಮದುವೆಯಾದರೂ ಮತ್ತೊಬ್ಬ ಮಹಿಳೆಯ ಸಹವಾಸ ಮಾಡುವ ಜತೆಗೆ ಆಕೆಯನ್ನು ಕೊಲೆಗೈದ ಅರ್ಚಕನು ಕಂಬಿ ಎಣಿಸುತ್ತಿದ್ದಾನೆ.