
ನಮಾಜ್ ಮಾಡುತ್ತಿದ್ದ ಜನರಿಗೆ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ; ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿ ಅಮಾನತು; ಶಿಸ್ತುಕ್ರಮದ ಭರವಸೆ
ನವದೆಹಲಿ: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರನ್ನು ದೆಹಲಿ ಪೊಲೀಸನೊಬ್ಬ ಕಾಲಿನಿಂದ ಒದ್ದ ಘಟನೆ ನಡೆದಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ.
ದೆಹಲಿಯ ಇಂದರ್ಲೋಕ್ ಪ್ರದೇಶದ ಮಸೀದಿಯೊಂದರ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸನ ಈ ಅನುಚಿತ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದ ಬಳಿಕ ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಬಹಳಷ್ಟು ಜನರು ದೆಹಲಿ ಪೊಲೀಸ್ ಅಧಿಕಾರಿಯ ವರ್ತನೆಗೆ ಆಕ್ರೋಶಗೊಂಡಿದ್ದಾರೆ. ನಮಾಜ್ ಮಾಡುತ್ತಿದ್ದ ಆ ಪೊಲೀಸ್ ಅನ್ನು ಅದೇ ಸಮುದಾಯದ ಜನರು ಸುತ್ತುವರಿದು ಪ್ರತಿಭಟಿಸಿದ್ದಾರೆ.
ಕಾಂಗ್ರೆಸ್ನ ರಾಜ್ಯಸಭಾ ಸಂಸದರಾದ ಇಮ್ರಾನ್ ಪ್ರತಾಪ್ಗಡಿ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಲೀಸ್ ಅಧಿಕಾರಿಯ ಮನಸ್ಸಿನಲ್ಲಿ ಅದೆಷ್ಟು ದ್ವೇಷ ತುಂಬಿರಬೇಡ ಎಂದು ಅವರು ವಿಷಾದಿಸಿದ್ದಾರೆ.
‘ನಮಾಜ್ ಮಾಡುತ್ತಿರುವವರನ್ನು ಒದೆಯುತ್ತಿರುವ ಈ ದೆಹಲಿ ಪೊಲೀಸ್ ಅಧಿಕಾರಿಗೆ ಮಾನವೀಯತೆಯ ಮೂಲಭೂತ ಅಂಶವೂ ಗೊತ್ತಿಲ್ಲ ಎನಿಸುತ್ತದೆ. ಈ ವ್ಯಕ್ತಿಯ ಹೃದಯದಲ್ಲಿ ಅದೆಷ್ಟು ದ್ವೇಷ ತುಂಬಿರಬೇಡ? ಈ ಅಧಿಕಾರಿಯ ವಿರುದ್ಧ ಸೂಕ್ತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ದೆಹಲಿ ಪೊಲೀಸರಿಗೆ ಮನವಿ ಮಾಡುತ್ತೇನೆ,’ ಎಂದು ಇಮ್ರಾನ್ ಪ್ರತಾಪ್ಗಡಿ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಇಂದರ್ಲೋಕ್ ಪ್ರದೇಶದ ಮಸೀದಿಯಲ್ಲಿ ಶುಕ್ರವಾರದ ನಮಾಜ್ನಲ್ಲಿ ಒಳಗೆ ಜನರು ತುಂಬಿಹೋಗಿರುತ್ತಾರೆ. ಹೀಗಾಗಿ ಒಳಗೆ ಜಾಗ ಇಲ್ಲದ ಕಾರಣ ಕೆಲವರು ಹೊರಗೆ ನಮಾಜ್ ಮಾಡಲು ಆರಂಭಿಸಿರುತ್ತಾರೆ. ರಸ್ತೆ ಸಂಚಾರಕ್ಕೆ ಅಡ್ಡಿ ಆಗುತ್ತದೆಂದು ದೆಹಲಿ ಪೊಲೀಸರು ಅಲ್ಲಿಗೆ ಬಂದು ನಮಾಜ್ ನಿರತರನ್ನು ಚದುರಿಸಲು ಯತ್ನಿಸಿದ್ದಾರೆ. ಆಗ ಒಬ್ಬ ಪೊಲೀಸ್ ಅಧಿಕಾರಿ ನಮಾಜ್ ನಿರತರನ್ನು ಕಾಲಿನಿಂದ ಒದ್ದು ದರ್ಪತನ ತೋರಿದರೆನ್ನಲಾಗಿದೆ.
ದೆಹಲಿ ಡಿಸಿಪಿ ಎಂಕೆ ಮೀನಾ ಅವರು ಈ ಘಟನೆಯನ್ನು ತನಿಖೆಗೆ ಒಳಪಡಿಸಿರುವುದಾಗಿ ತಿಳಿಸಿದ್ದಾರೆ. ಅದೇ ವೇಳೆ ಆರೋಪಿತ ಅಧಿಕಾರಿಯನ್ನು ತತ್ಕ್ಷಣವೇ ಅಮಾನತುಗೊಳಿಸಿ ಶಿಸ್ತುಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.