ಮಾ.5ರಂದು ಉಚ್ಚಿಲದಲ್ಲಿ ಪರಿಯಾಳ ಸಮಾಜ ಸಮುದಾಯ ಭವನ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ವತಿಯಿಂದ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಕಾಪುವಿನ ಉಚ್ಚಿಲದಲ್ಲಿ ನಿರ್ಮಿಸಲಾದ ಪರಿಯಾಳ ಸಮಾಜ ಸಮುದಾಯ ಭವನದ ಉದ್ಘಾಟನೆಯು ಇದೇ ಮಾ.5ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯು.ಶಂಕರ ಸಾಲಿಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂ. ನೆರವು ದೊರಕಿದ್ದು, ಉಳಿದಂತೆ ದಾನಿಗಳಿಂದ ಸಂಗ್ರಹಿಸಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಇನ್ನೂ 15 ಲಕ್ಷ ರೂ. ಅಗತ್ಯವಿದೆ ಎಂದರು.
ಪರಿಯಾಳ ಸಮುದಾಯ ಭವನವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾಪು ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ದೀಪ ಬೆಳಗಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬಡಾ ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್ ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ.ಶಂಕರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸುಧಾಕರ ಸಾಲಿಯಾನ್, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಭಾಸ್ಕರ್, ಸಂದೀಪ ಸಾಲಿಯಾನ್ ಹಾರಾಡಿ ಉಪಸ್ಥಿತರಿದ್ದರು.