
ಕೇಜ್ರಿವಾಲ್'ರನ್ನು ಕೊಲ್ಲುವ ಉದ್ದೇಶದಿಂದ ಜೈಲಿನಲ್ಲಿ ಇನ್ಸುಲಿನ್ ನೀಡಲು ನಿರಾಕರಿಸಲಾಗುತ್ತಿದೆ: ಪತ್ನಿ ಸುನೀತಾ ಕೇಜ್ರಿವಾಲ್ ಆರೋಪ
ರಾಂಚಿ: ‘ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲುವ ಉದ್ದೇಶದಿಂದ ಅವರಿಗೆ ಜೈಲಿನಲ್ಲಿ ಇನ್ಸುಲಿನ್ ನೀಡಲು ನಿರಾಕರಿಸಲಾಗುತ್ತಿದೆ’ ಎಂದು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಆರೋಪಿಸಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಇಂಡಿ ಮೈತ್ರಿ ಕೂಟದ ‘ನ್ಯಾಯ್’ ಚುನಾವಣಾ ಸಮಾವೇಶದಲ್ಲಿ ಅವರು ಈ ಆರೋಪ ಮಾಡಿದ್ದಾರೆ.
‘ನನ್ನ ಪತಿ ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲಬೇಕೆಂದು ಬಿಜೆಪಿ ಬಯಸಿದೆ. ಅವರ ಆಹಾರ ತಯಾರಿಕೆಯನ್ನೂ ಕೂಡ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಇನ್ಸುಲಿನ್ ನಿರಾಕರಿಸಲಾಗುತ್ತಿದೆ. ನನ್ನ ಪತಿ ಮಧುಮೇಹ ಪೀಡಿತರಾಗಿದ್ದು, 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಿತ್ಯ 50 ಯೂನಿಟ್ ಇನ್ಸುಲಿನ್ ಬೇಕಾಗಿದೆ’ ಎಂದು ಸುನೀತಾ ವಿವರಿಸಿದರು.
‘ಜನರ ಪರವಾಗಿ ಸೇವೆ ಮಾಡಿದ್ದಕ್ಕಾಗಿ ನನ್ನ ಪತಿಯನ್ನು ಜೈಲಿಗೆ ಹಾಕಲಾಗಿದೆ. ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿದ ಸುನೀತಾ ಕೇಜ್ರಿವಾಲ್, ಬಿಜೆಪಿಯ ಏಕಚಕ್ರಾಧಿಪತ್ಯದ ವಿರುದ್ಧ ಹೋರಾಡಿ ನಾವು ಗೆಲುವು ಸಾಧಿಸಲಿದ್ದೇವೆ. ಅರವಿಂದ ಕೇಜ್ರಿವಾಲ್ ಹಾಗೂ ಹೇಮಂತ್ ಸೊರೇನ್ ಜೈಲಿನಿಂದ ಹೊರ ಬರಲಿದ್ದಾರೆ’ ಎಂದು ನ್ಯಾಯಾಲಯದ ಮೇಲೆ ತಮಗಿರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.