ಪೊಲೀಸ್ ಪ್ರಕರಣವನ್ನು ಎದುರಿಸಿದ್ದ ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ನೈತಿಕತೆ ಪಾಠವನ್ನು ಕಲಿಯಬೇಕಾಗಿಲ್ಲ: ಅಲೆವೂರು ಹರೀಶ್ ಕಿಣಿ
ಉಡುಪಿ: ಪಕ್ಷದ ಸಂಸದರ ವಿರುದ್ಧವೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಬಿಟ್ಟಿದ್ದ ಕಾರಣಕ್ಕಾಗಿ ಪೊಲೀಸ್ ಪ್ರಕರಣವನ್ನು ಎದುರಿಸಿದ್ದ ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ನೈತಿಕತೆ ಪಾಠವನ್ನು ಕಲಿಯಬೇಕಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪಕ್ಷದ ಚುನಾವಣಾ ಅಭಿಯಾನ ಪ್ರಮುಖರ ಪ್ರಗತಿ ಪರಿಶೀಲನಾ ಸಭೆಯ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕಾಂಗ್ರೆಸ್ ವಿರುದ್ಧ ಮಾಡಿರುವ ಟೀಕೆಗೆ ಅವರು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಶಿಸ್ತಿನ ಪಾಠ ಹೇಳುವ ಈ ಮೇಸ್ಟ್ರು ಕುಂದಾಪುರದಲ್ಲಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದ ಸಾವಿರಾರು ಜನರಿದ್ದ ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವಿರುದ್ಧ ತನ್ನ ಬೆರಳೆಣಿಕೆಯ ಬೆಂಬಲಿಗರೊಂದಿಗೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಹಿಡಿದು ಘೋಷಣೆ ಕೂಗಿ ನಂತರ ಪೋಲಿಸರಿಂದ ಹೊರ ನೂಕಿಸಿಕೊಂಡ ಘಟನೆ ಸ್ವಘೋಷಿತ ಶಿಸ್ತಿನ ಪಕ್ಷಕ್ಕೆ ಶೋಭೆಯಲ್ಲ ಎನ್ನುವುದನ್ನು ಮರೆತಂತಿದೆ.ಪಕ್ಷದಲ್ಲಿ ಇದ್ದಾಗಲೇ ಪಕ್ಷದ ಅಧಿಕೃತ ಅಭ್ಯರ್ಥಿ ಹಾಲಾಡಿಯವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳದೆ ಕಾಟಾಚಾರಕ್ಕೆ ಮಾತ್ರ ಅಕ್ಕ-ಪಕ್ಕದ ಕ್ಷೇತ್ರದ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಯಕರುಗಳೇ ಇಂದು ಪಕ್ಷ ನಿಷ್ಠೆಯ ಬಗ್ಗೆ ಬೇರೆಯವರಿಗೆ ಬೋಧನೆ ಮಾಡುತ್ತಿರುವುದು ವಿಪರ್ಯಾಸವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೇವಲ ಒಂದು ವರ್ಷದ ಒಳಗೆ ಸಚಿವೆ ಹೆಬ್ಬಾಳ್ಕರ್ ಅವರು ಎಷ್ಟು ಬಾರಿ ಜಿಲ್ಲೆಗೆ ಬಂದಿದ್ದಾರೆ, ಎಷ್ಟು ಸಭೆಗಳನ್ನು ನಡೆಸಿದ್ದಾರೆ ಎನ್ನುವ ಹಾಗೂ ಕಳೆದ 10 ವರ್ಷಗಳಿಂದ ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ ಶೋಭಾ ಕರಂದ್ಲಾಜೆ ಅವರು ಎಷ್ಟು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಹಾಗೂ ಎಷ್ಟು ಸಭೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಪಡೆದುಕೊಂಡು ಸಾರ್ವಜನಿಕ ವೇದಿಕೆಗೆ ಬಿಜೆಪಿ ಅಧ್ಯಕ್ಷರು ಚರ್ಚೆಗೆ ಬರಲಿ. ಆಗ ತಿಳಿಯುತ್ತದೆ ಯಾವ ಪಕ್ಷದ ಜನಪ್ರತಿನಿಧಿಗಳ ವಿರುದ್ಧ ಮತದಾರರು ಆಕ್ರೋಶ ಹೇಗೆ ಇರುತ್ತದೆ ಎಂದು ಹೇಳಿರುವ ಕಿಣಿ , ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಕಡೆ ಕಲ್ಲು ಎಸೆಯುವ ಪ್ರವೃತ್ತಿ ಬದಲಾಯಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಸುಳ್ಳಿನ ಫ್ಯಾಕ್ಟರಿ ಆಗಿರುವ ಬಿಜೆಪಿ ಪಕ್ಷದ ಯಾವ ಹೇಳಿಕೆ ಹಾಗೂ ಭರವಸೆಯ ಬಗ್ಗೆ ದೇಶವಾಸಿಗಳಿಗೆ ಯಾವುದೇ ದಾಖಲೆ ಅಗತ್ಯವಿಲ್ಲ. ಬುಲೆಟ್ ಟ್ರೈನ್, ಪೆಟ್ರೋಲ್ ದರ, ನೋಟ್ ಬ್ಯಾನ್, ಬ್ಯಾಂಕ್ ಅಕೌಂಟ್, ಸ್ವೀಸ್ ಬ್ಯಾಂಕ್ ಮುಂತಾದ ವಿಷಯಗಳ ಸುಳ್ಳಿನ ಕಂತೆಗಳೇ ಜನರ ಮನಸ್ಸಿನಲ್ಲಿ ದಾಖಲೆಗಳಾಗಿದೆ ಎನ್ನುವುದನ್ನು ಮಾನ್ಯ ಅಧ್ಯಕ್ಷರು ಗಮನಿಸಲಿ.
ಜನಪ್ರತಿನಿಧಿಗಳಾಗಿದ್ದಾಗ ಹಾಗೂ ಅಧಿಕಾರದಲ್ಲಿ ಇದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡದೆ ಇದ್ದವರಿಗೆ ಮಾತ್ರ ಬೇರೆಯವರ ಹೆಸರಿನಲ್ಲಿ ಮತ ಕೇಳಬೇಕಾದ ಅನಿವಾರ್ಯತೆ ಬರುತ್ತದೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಈ ಅನಿವಾರ್ಯತೆ ಇಲ್ಲ.ಶಾಸಕ, ಸಚಿವ, ಸಂಸದ ಹಾಗೂ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಮಾಡಿರುವ ಕೆಲಸಗಳು ಸಾಕಷ್ಟು ಇರೋದರಿಂದ ಈ ನೆಲೆಯಲ್ಲಿ ಮತದಾರರ ಬಳಿ ಹೋಗುತ್ತಿದ್ದಾರೆ. ಇದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿರುವ ಅವರು ಬೇರೆಯವರನ್ನು ಕಾಮಾಲೆ ಕಣ್ಣಿನಿಂದ ನೋಡುವುದನ್ನು ಮೊದಲು ಬದಲಾಯಿಸಿಕೊಳ್ಳಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.