ಚುನಾವಣಾ ಬಾಂಡ್ ಜಗತ್ತಿನ ಬಹುದೊಡ್ಡ ಸುಲಿಗೆ ಯೋಜನೆ; ಮೋದಿ ಭ್ರಷ್ಟಾಚಾರದ ಚಾಂಪಿಯನ್: ರಾಹುಲ್ ಗಾಂಧಿ
ಗಾಜಿಯಾಬಾದ್: ಕೇಂದ್ರ ಬಿಜೆಪಿ ಸರಕಾರದ ಚುನಾವಣಾ ಬಾಂಡ್ ಜಗತ್ತಿನ ಬಹುದೊಡ್ಡ ಸುಲಿಗೆ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಇಂಡಿಯಾ ಬಣದ ಪರ ಬಲಿಷ್ಠ ಆಂತರಿಕ ಅಲೆ ಇದೆ. ಬಿಜೆಪಿಯು 150 ಸ್ಥಾನಗಳಿಗೆ ನಿಲ್ಲಲಿದೆ ಎಂದು ಹೇಳಿದರು.
‘ಈ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ದೇಶದಲ್ಲಿ ಒಂದೆಡೆ ಸಂವಿಧಾನ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಂತ್ಯ ಹಾಡಲು ಹೊರಟಿರುವ ಆರ್‌ಎಸ್ಎಸ್ ಮತ್ತು ಬಿಜೆಪಿ ಇವೆ. ಮತ್ತೊಂದೆಡೆ, ಸಂವಿಧಾನ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಿಸುವ ಇಂಡಿಯಾ ಬಣವಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಎರಡು ಪ್ರಮುಖ ಸಮಸ್ಯೆಗಳಿವೆ. ಆದರೆ, ಅದರಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದರು.
ಇತ್ತೀಚೆಗೆ, ಚುನಾವಣಾ ಬಾಂಡ್ ಕುರಿತಂತೆ ಸಂದರ್ಶನದಲ್ಲಿ ಪ್ರಧಾನಿ ಮೋದಿ ನೀಡಿರುವ ಸ್ಪಷ್ಟನೆಯು ಪೂರ್ವನಿರ್ಧರಿತ ಮತ್ತು ಫ್ಲಾಪ್ ಶೋ ಎಂದು ಕುಟುಕಿದ್ದಾರೆ.
ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್ ಯೋಜನೆ ಜಾರಿಗೆ ತರಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದೇ ನಿಜವಾಗಿದ್ದರೆ, ಸುಪ್ರೀಂ ಕೋರ್ಟ್ ಏಕೆ ಅದನ್ನು ರದ್ದುಪಡಿಸುತ್ತದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಪಾರದರ್ಶಕತೆ ತರುವುದೇ ನಿಮ್ಮ ಉದ್ದೇಶವಾಗಿದ್ದರೆ, ಬಿಜೆಪಿಗೆ ಸಾವಿರಾರು ಕೋಟಿ ದೇಣಿಗೆ ನೀಡಿದವರ ಹೆಸರುಗಳು ಮತ್ತು ದಿನಾಂಕವನ್ನು ಬಚ್ಚಿಟ್ಟಿದ್ದೇಕೆ? ಎಂದೂ ವಾಗ್ದಾಳಿ ನಡೆಸಿದ್ದಾರೆ.
‘ಬಿಜೆಪಿಗೆ ದೇಣಿಗೆ ನೀಡಿದ ಕೆಲವೇ ದಿನಗಳಲ್ಲಿ ಕಂಪನಿಯೊಂದು ಸಾವಿರಾರು ಕೋಟಿ ರೂಪಾಯಿಯ ಗುತ್ತಿಗೆ ಪಡೆದಿದೆ. ಸಿಬಿಐ ಮತ್ತು ಇ.ಡಿ ತನಿಖೆ ಎದುರಿಸುತ್ತಿದ್ದ ಮತ್ತೊಂದು ಕಂಪನಿ ಮೇಲಿನ ತನಿಖೆಯನ್ನು ದೇಣಿಗೆ ನೀಡಿದ 10–15 ದಿನಗಳಲ್ಲಿ ಅಂತ್ಯಗೊಳಿಸಲಾಗಿದೆ’ಎಂದು ಅವರು ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಸ್ಪಷ್ಟನೆ ನೀಡಿದರೂ ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಚಾಂಪಿಯನ್ ಎಂಬುದು ಸಂಪೂರ್ಣ ದೇಶಕ್ಕೆ ಗೊತ್ತಿದೆ’ ಎಂದು ರಾಹುಲ್ ಹೇಳಿದ್ದಾರೆ.
‘15-20 ದಿನಗಳ ಹಿಂದೆ ಬಿಜೆಪಿ 180 ಸ್ಥಾನ ಗೆಲ್ಲಬಹುದಾದ ವಾತಾವರಣವಿತ್ತು. ಈಗ ಅದು 150 ಸ್ಥಾನಗಳವರೆಗೆ ಮಾತ್ರ ಗೆಲ್ಲುವ ಸಾಧ್ಯತೆ ಇದ್ದಂತೆ ತೋರುತ್ತಿದೆ. ಎಲ್ಲ ರಾಜ್ಯಗಳಿಂದ ನಾವು ವರದಿ ಪಡೆಯುತ್ತಿದ್ದೇವೆ. ನಾವು ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಇಂಡಿಯಾ ಬಣದ ಪರ ಆಂತಂರಿಕ ಅಲೆ ಜೋರಾಗಿದೆ’ ಎಂದು ಹೇಳಿದ್ದಾರೆ.
‘ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿ ಅತ್ಯಂತ ಬಲಿಷ್ಠವಾಗಿದ್ದು, ನಮ್ಮ ಪ್ರದರ್ಶನವೂ ಉತ್ತಮವಾಗಿರಲಿದೆ’ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.