ಪ್ರಮಾಣ ವಚನದ ವೇಳೆ ರಾಷ್ಟ್ರಪತಿ ಭವನದಲ್ಲಿ ಒಡಾಡಿದ ಪ್ರಾಣಿಯೊಂದರ ವೀಡಿಯೊ ಸಖತ್ ವೈರಲ್! ಈ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದು ಹೀಗೆ....
Tuesday, June 11, 2024
ನವದೆಹಲಿ: ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದ ವೇಳೆ (ಜೂನ್ 9) ರಾಷ್ಟ್ರಪತಿ ಭವನದಲ್ಲಿ ಪ್ರಾಣಿಯೊಂದು ಒಡಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಾಷ್ಟ್ರಪತಿ ಭವನಕ್ಕೆ ಚಿರತೆ ನುಗ್ಗಿದೆ ಎಂದುಕೊಂಡು ನೆಟ್ಟಿಗರು ಹೌಹಾರಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ‘ರಾಷ್ಟ್ರಪತಿ ಭವನದಲ್ಲಿ ಒಡಾಡಿರುವುದು ಚಿರತೆ ಅಥವಾ ಯಾವುದೋ ಕಾಡುಪ್ರಾಣಿ ಅಲ್ಲ, ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ಮನೆ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಕಿವಿಕೊಡಬೇಡಿ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿಯ ದುರ್ಗಾ ದಾಸ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಅಭಿನಂದಿಸುತ್ತಿರುವ ವೇಳೆ ಹಿಂದೆ ಯಾವುದೋ ಪ್ರಾಣಿ ಭವನದ ಒಳಹೊಕ್ಕ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅದು ದೊಡ್ಡ ಗಾತ್ರದ ಬೆಕ್ಕಾಗಿರುವ ಕಾರಣ ದೂರದಿಂದ ಚಿರತೆಯಂತೆಯೇ ಭಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ವದಂತಿಗೆ ದೆಹಲಿ ಪೊಲೀಸರು ತೆರೆ ಎಳೆದಿದ್ದಾರೆ.