
60 ಲಕ್ಷ ರೂ.ಗೆ ಬೆಲೆಯಾಳುವ ಅಪರೂಪದ 11 ಟೋಕೆ ಗೆಕ್ಕೊ ಹಲ್ಲಿಗಳ ಕಳ್ಳಸಾಗಾಣಿಕೆಗೆ ಯತ್ನ; ಮೂವರ ಬಂಧನ
ದಿಸ್ಪುರ್(ಅಸ್ಸಾಂ): ಅಪರೂಪದ ಟೋಕೆ ಗೆಕ್ಕೊ ಹಲ್ಲಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಸ್ಸಾಂನ (Assam) ದಿಬ್ರುಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದೇಬಾಶಿಸ್ ದೋಹುಟಿಯಾ (34), ಮನಾಶ್ ದೋಹುಟಿಯಾ (28) ಮತ್ತು ದೀಪಂಕರ್ ಘರ್ಫಾಲಿಯಾ (40) ಎಂದು ಗುರುತಿಸಲಾಗಿದೆ.
ಆರೋಪಿಗಳು ವಿಚಾರಣೆಯ ವೇಳೆ, ಅರುಣಾಚಲ ಪ್ರದೇಶದಿಂದ 11 ಟೋಕೆ ಗೆಕ್ಕೊಗಳನ್ನು ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಪ್ರತಿಯೊಂದನ್ನು 60 ಲಕ್ಷ ರೂ.ಗೆ ಮಾರಾಟ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
ದಿಬ್ರುಗಢದಲ್ಲಿ ಟೋಕೆ ಗೆಕ್ಕೊ ಹಲ್ಲಿಗಳ ಕಳ್ಳಸಾಗಣೆ ಬಗ್ಗೆ ಸುಳಿವಿನ ಮೇರೆಗೆ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡವು ತಂಡವು ದಿಬ್ರುಗಢ ಜಿಲ್ಲಾ ಪೊಲೀಸರು, ವನ್ಯಜೀವಿ ನ್ಯಾಯ ಆಯೋಗ ಮತ್ತು ಗುಪ್ತಚರ ದಳದ ಸಹಾಯದೊಂದಿಗೆ ಕಳ್ಳಸಾಗಾಣಿಕೆದಾರರನ್ನು ಗುರುತಿಸಿತ್ತು.
ಆರೋಪಿಗಳಲ್ಲಿ ಇಬ್ಬರು ಕಾರಿನಲ್ಲಿ ಹಾಗೂ ಮತ್ತೋರ್ವ ಬೈಕ್‌ನಲ್ಲಿ ಬಂದು, ದಿಬ್ರುಗಢದ ಡಾಬಾದೊಳಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ, ಒಬ್ಬ ಕಾರಿನಿಂದ ಬ್ಯಾಗ್ ತೆಗೆದುಕೊಂಡು ಡಾಬಾದೊಳಗೆ ತೆರಳಿದ್ದ. ಈ ವೇಳೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಟೋಕೆ ಗೆಕ್ಕೊಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅವುಗಳ ರಫ್ತನ್ನು ನಿಷೇಧಿಸಲಾಗಿದೆ. ಕಳ್ಳಸಾಗಾಣಿಕೆಯಲ್ಲಿ ಭಾಗಿಯಾದ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ.