ದೆಹಲಿ; ಜಿಮ್ ಡಂಬಲ್‌ನಿಂದ ಹೊಡೆದು ಮಹಿಳಾ ಕಮಾಂಡೋ ಹತ್ಯೆಗೈದ ಪತಿ!
ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯಲ್ಲಿ ಸ್ವಾಟ್ ಕಮಾಂಡೋ (Delhi SWAT Commando) ಆಗಿದ್ದ 27 ವರ್ಷದ ಮಹಿಳೆಯನ್ನು ಡಂಬಲ್‌ನಿಂದ ಹೊಡೆದು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತರಾಗಿದ್ದ ಕಾಜಲ್ ಚೌಧರಿ ಕೊಲೆಯಾದ ಮಹಿಳೆ. ಇವರು 4 ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ಮೇಲೆ ಪತಿ ಅಂಕುರ್ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ಆಗುತ್ತಿತ್ತು. ಕೋಪಗೊಂಡು ಹೆಂಡತಿ ತಲೆಗೆ ಡಂಬಲ್‌ನಿಂದ ಪತಿ ಹೊಡೆದಿದ್ದು, ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಚೌಧರಿಯ ಸಹೋದರ ನಿಖಿಲ್, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ತನ್ನ ಸಹೋದರಿ ಮೇಲೆ ಹಲ್ಲೆ ನಡೆದ ದಿನ ತನಗೆ ಕರೆ ಮಾಡಿದ್ದಳು ಎಂದು ಹೇಳಿದ್ದಾರೆ. ತಾನು ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಅಂಕುರ್ ಡಂಬಲ್‌ನಿಂದ ಆಕೆಗೆ ಹೊಡೆದಿದ್ದಾನೆ.
ಚೌಧರಿಯ ಅತ್ತೆ ಮತ್ತು ಇಬ್ಬರು ಅತ್ತಿಗೆಯರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ನಿಖಿಲ್ ಆರೋಪಿಸಿದ್ದಾರೆ. ಅಂಕುರ್ ತನ್ನ ಪತ್ನಿ ಕಾಜಲ್ ಪೋಷಕರಿಂದ ಹಣ ಪಡೆದಿದ್ದ ಎನ್ನಲಾಗಿದೆ. ಅಂಕುರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಚೌಧರಿ ಅವರನ್ನು 2022 ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ನೇಮಿಸಲಾಯಿತು. ಪ್ರಸ್ತುತ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳು (SWAT) ತಂಡದಲ್ಲಿ ನಿಯೋಜಿಸಲಾಗಿದೆ. ಅವರು 2023 ರಲ್ಲಿ ದೆಹಲಿ ಕಂಟೋನ್ಮೆಂಟ್‌ನಲ್ಲಿ ನಿಯೋಜನೆಗೊಂಡಿದ್ದ ಅಂಕುರ್ ಅವರನ್ನು ವಿವಾಹವಾದರು. ದಂಪತಿಗೆ ಒಂದೂವರೆ ವರ್ಷದ ಮಗನಿದ್ದಾನೆ.