ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವಿರೋಧ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವಿರೋಧ ಆಯ್ಕೆ

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಶ್ವರ್ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸಚಿವ ಈಶ್ವರ್​ ಖಂಡ್ರೆ ಅವರು ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕಾರಿ ಸಭೆಯಲ್ಲಿ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ ಬಿ ಖಂಡ್ರೆ ಅವರು ಕಳೆದ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು.

ತಮ್ಮ ಪೂಜ್ಯ ತಂದೆ ಭೀಮಣ್ಣ ಖಂಡ್ರೆಯವರ ಮಾರ್ಗದಲ್ಲೇ ನಡೆದು, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಈಶ್ವರ ಬಿ ಖಂಡ್ರೆ ಈಗ ಮಹಾ ಸಭಾದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಮಾಜಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದ ಅವರು, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ತಾವು ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು ಎಂದು ತಿಳಿಸಿದ ಅವರು, ನಮ್ಮ ಸಮಾಜದಲ್ಲೂ ಶೇ.40ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನರು ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ಸಭಾ ವತಿಯಿಂದ ನೂತನ ಅಧ್ಯಕ್ಷನಾಗಿ ಶ್ರಮಿಸುವುದಾಗಿ ಹೇಳಿದರು.

1000 ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ: ಖಂಡ್ರೆ

ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಲು ಮುಂದಿನ ಮಾರ್ಚ್ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಿ, ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನ ಇದ್ದು, ಭವನ ಇಲ್ಲದ ಜಿಲ್ಲೆಗಳಲ್ಲಿ ಭವನ ನಿರ್ಮಾಣ ಮಾಡಲೂ ಶ್ರಮಿಸುವುದಾಗಿ, ಈ ಭವನದಲ್ಲಿ ಸಮುದಾಯದ ಪ್ರತಿಭಾವಂತರಿಗೆ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು ಎಂದರು.

1904ರಲ್ಲಿ ಅಂದರೆ 122 ವರ್ಷಗಳ ಹಿಂದೆ ಪರಮಪೂಜ್ಯ ಹಾನಗಲ್ ಕುಮಾರೇಶ್ವರ ಮಹಾಸ್ವಾಮೀಜಿ ಅವರು, ನಮ್ಮ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಿದ ಫಲವಾಗಿ ಜನ್ಮ ತಾಳಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರುಗಳಾಗಿ ಸಿರಸಂಗಿ ಲಿಂಗರಾಜದೇಸಾಯರು, ರಾಜಾ ಲಖಮನಗೌಡರು, ಫ.ಗು. ಹಳಕಟ್ಟಿಯವರು, ಬಂಥನಾಳ ಸಂಗನ ಬಸವ ಸ್ವಾಮಿಗಳು, ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮೀಜಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮೊದಲಾದವರು ಸೇವೆ ಸಲ್ಲಿಸಿದ್ದಾರೆ. ಈ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.

Ads on article

Advertise in articles 1

advertising articles 2

Advertise under the article