ಉಡುಪಿ: 15 ದಿನಗಳೊಳಗೆ ನಿರಾಕ್ಷೇಪಣಾ ಪತ್ರದ ವಿಲೇವಾರಿಯಾಗದಿದ್ದರೆ ಅನಿರ್ಧಿಷ್ಟಾವಧಿ ಹೋರಾಟ;ಕರವೇ ಎಚ್ಚರಿಕೆ
ಉಡುಪಿ: ಆರ್.ಟಿ.ಓ. ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನದ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದೆ ಸತಾಯಿಸುತ್ತಿದ್ದು, ಇದರಿಂದ ಸಾವಿರಕ್ಕೂ ಹೆಚ್ಚು ನಿರಾಕ್ಷೇಪಣಾ ಪತ್ರದ ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಆರ್.ಟಿ.ಓ. ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಉಡುಪಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆಗೆ ಅಧಿಕಾರಿಗಳು 2020 ಕ್ಕಿಂತ ಮೊದಲಿನ ವಾಹನದ ಆರ್.ಸಿ. ಪತ್ರದಲ್ಲಿ ವೀಲ್ ಬೆಸ್ ಹಾಗೂ ಎಚ್.ಪಿ ಅನ್ನು ನಮೂದಿಸಿಲ್ಲ. ಹಾಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. 2020ನೇ ಇಸವಿಗಿಂತ ಮೊದಲಿನ ವಾಹನಗಳ 4.2. ಪತ್ರದಲ್ಲಿ ಬಿಟ್ಟುಹೋಗಿರುವ ವಿಚಾರಗಳನ್ನು ನಮೂದಿಸುವ ಜವಾಬ್ದಾರಿ ಸರಕಾರದ್ದು ಅಥವಾ ಸಂಬಂಧಪಟ್ಟ ಇಲಾಖೆಯದ್ದು. ಇವರುಗಳ ಬೇಜವಾಬ್ದಾರಿಯಿಂದ ಆಗಿರುವ ಲೋಪದೋಷಕ್ಕೆ ವಾಹನ ಮಾಲೀಕರನ್ನು ಬಲಿಪಶು ಮಾಡುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
580 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಆರ್.ಟಿ.ಓ. ನಿರೀಕ್ಷಕರು ತಮ್ಮ ಮೊಬೈಲ್ ಆಪ್‌ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಪತ್ರವನ್ನು ತರಿಸಿಕೊಡುವ ಕೆಲಸವನ್ನು ಪಕ್ಕದ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಆರ್.ಟಿ.ಓ. ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಆರ್.ಟಿ.ಓ. ಅಧಿಕಾರಿಗಳು 15 ದಿನಗಳ ಒಳಗಡೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಆರ್.ಟಿ.ಓ. ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು..
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಲಾಲ್, ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್ ನಿಜಾಮ್, ಸುಧೀರ್ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್ ಸನಿಲ್, ಮಹಿಳಾ ಸಮಿತಿ ಉಪಾಧ್ಯಕ್ಷೆ ದೇವಕಿ ಬರ್ಕೂರು ಇದ್ದರು.