ದುಬೈ; ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್‌ನಿಂದ ಬ್ಯಾರಿ ಸಮುದಾಯದ ಉದ್ಯಮಿಗಳಿಗಾಗಿ 'ಅವಕಾಶ, ಸ್ಥೈರ್ಯ ಮತ್ತು ಬೆಳವಣಿಗೆ' ಕುರಿತು ಸಭೆ: 140ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ

ದುಬೈ: 'ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಯುಎಇ' ಘಟಕವು ರವಿವಾರ ದುಬೈನ ಜದ್ದಾಫ್ ಮ್ಯಾರಿಯೆಟ್ ಹೋಟೆಲಿನಲ್ಲಿ ಯುಎಇಯಲ್ಲಿರುವ ಬ್ಯಾರಿ ಸಮುದಾಯದ ವಿಶೇಷ ಉದ್ಯಮಿಗಳಿಗಾಗಿ 'ಅವಕಾಶ, ಸ್ಥೈರ್ಯ ಮತ್ತು ಬೆಳವಣಿಗೆ' ಕುರಿತ ಉದ್ಯಮಿಗಳ ಸಭೆಯೊಂದನ್ನು ಆಯೋಜಿಸಲಾಗಿತ್ತು.






ಈ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ಪ್ರೇರಣಾದಾಯಕ ತರಬೇತುದಾರ ರಿಯಾಸ್ ಹಕ್ಕಿಮ್ ಮಾತನಾಡಿ, ಒಬ್ಬ ಯಶಸ್ವಿ ಉದ್ಯಮಿ ಆಗಬೇಕಾದರೆ, ಭಯವನ್ನು ಬಿಟ್ಟು ಕಲಿಯುವ ಮನಸ್ಸು ಇರಬೇಕು. ಪ್ರತಿಯೊಂದು ವಿಫಲತೆಯೂ ಒಂದು ಪಾಠ, ಪ್ರತಿಯೊಂದು ಸವಾಲೂ ಒಂದು ಅವಕಾಶ ಎಂದರು.

ನೀವು ನಿಮ್ಮ ಕನಸುಗಳನ್ನು ದೊಡ್ಡದಾಗಿ ಯೋಚಿಸಿ, ಅದನ್ನು ಸಾಧಿಸಲು ಕ್ರಮಬದ್ಧವಾಗಿ ಕೆಲಸ ಮಾಡಿದರೆ, ಯಶಸ್ಸು ನಿಮ್ಮನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಅವರು, ಉದ್ಯಮದಲ್ಲಿ ನಿಜವಾದ ಜಯ ಎಂದರೆ ಕೇವಲ ಲಾಭವಲ್ಲ, ನೀವು ಎಷ್ಟು ಜನರ ಜೀವನದಲ್ಲಿ ಒಳ್ಳೆಯ ಬದಲಾವಣೆ ತಂದಿದ್ದೀರಿ ಎಂಬುದೇ ನಿಮ್ಮ ದೊಡ್ಡ ಸಾಧನೆ ಆಗುತ್ತದೆ ಎಂದು ಹೇಳಿದರು.




ಇಂದಿನ ಯುಗದಲ್ಲಿ ಉತ್ಪನ್ನಗಳು ಮಾತ್ರ ಮಾರಾಟವಾಗುವುದಿಲ್ಲ, ನಮ್ಮ ಸಂಬಂಧಗಳು ಮಾರಾಟವಾಗುತ್ತವೆ. ನಿಮ್ಮ ಗ್ರಾಹಕರ ಮನಸ್ಸನ್ನು ಗೆಲ್ಲಲು, ಮೊದಲು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿಯೇ ಭಾವನಾತ್ಮಕ ಬುದ್ಧಿಮತ್ತೆ ಉದ್ಯಮದ ಹೃದಯವಾಗಿದೆ.

ಉದ್ಯಮದಲ್ಲಿ ಸ್ಥೈರ್ಯವೆಂದರೆ ಎಂದಿಗೂ ಬೀಳದಿರುವುದಲ್ಲ, ಬಿದ್ದಾಗ ಮತ್ತೆ ಎದ್ದು ನಿಲ್ಲುವ ಶಕ್ತಿ. ಜೀವನದಲ್ಲಿಯೂ ಉದ್ಯಮದಲ್ಲಿಯೂ ಎದುರಾಗುವ ಪ್ರತಿಯೊಂದು ಕಷ್ಟವು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುತ್ತದೆ ಎಂದ ರಿಯಾಸ್ ಹಕ್ಕಿಮ್, ಬೆಳವಣಿಗೆ ಎಂದರೆ ಕೇವಲ ಹೊರಗಿನ ಯಶಸ್ಸಲ್ಲ, ಅದು ಒಳಗಿನ ಪರಿವರ್ತನೆ ಎಂದರು.

ಇದಕ್ಕೂ ಮೊದಲು 'ವ್ಯವಹಾರದಲ್ಲಿ ಉದಯೋನ್ಮುಖ ಅವಕಾಶಗಳು(Emerging Opportunities ) ಮತ್ತು ಮಾರುಕಟ್ಟೆ ಸ್ಥೈರ್ಯ (Market Resilience)' ವಿಷಯದಲ್ಲಿ ಪ್ಯಾನೆಲ್ ಚರ್ಚೆ ನಡೆಯಿತು. ಚರ್ಚೆಯಲ್ಲಿ ಪ್ಯಾನೆಲಿಸ್ಟ್‌ಗಳಾಗಿ ಲಂಡನ್ ಅಮೇರಿಕನ್ ಯುನಿವರ್ಸಿಟಿ ಕಾಲೇಜ್ ನ ವೈಸ್ ಛಾನ್ಸಿಲರ್ ಡಾ. ಕಾಪು ಮುಹಮ್ಮದ್, ಎಮಿರೇಟ್ಸ್ ಫಸ್ಟ್ ಗ್ರೂಪ್ ನ ಸಿಇಒ ಜಮಾದ್ ಉಸ್ಮಾನ್, ಟಿಸ್ಕೊ ನಿರ್ದೇಶಕ ಸಿಎ ತಮೀಮ್, ದುಬೈ ಇನ್ಫೋಸ್ಕಿಲ್ಸ್ ಸಿಇಒ ಡಾ. ನಸ್ರೀನ್ ಬಿಂತ್ ಅಹ್ಮದ್ ಬಾವಾ ಭಾಗವಹಿಸಿದ್ದು, ಬಿಸಿಸಿಐ ಉಪಾಧ್ಯಕ್ಷ ಬಶೀರ್ ಕಿನ್ನಿಂಗರ್ ಪ್ಯಾನೆಲ್ ಚರ್ಚೆ ಕಾರ್ಯಕ್ರಮ ನಡೆಸಿಕೊಟ್ಟರು.

ಸಭೆಯ ಆರಂಭದಲ್ಲಿ 'ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಯುಎಇ' ಘಟಕ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಎಲ್ಲರನ್ನು ಸ್ವಾಗತಿಸಿ, ಸಭೆಯ ಕುರಿತು ಹಾಗು ಬಿಸಿಸಿಐಯ ಬೆಳವಣಿಗೆ, ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ಯುಎಇನ ವಿವಿಧ ಭಾಗಗಳಿಂದ ಭಾಗವಹಿಸಿದ ಪ್ರಮುಖ ಹಾಗೂ ಉದಯೋನ್ಮುಖ ಬ್ಯಾರಿ ಸಮುದಾಯದ 140ಕ್ಕೂ ಹೆಚ್ಚು ಮಂದಿ ಆಹ್ವಾನಿತ ಉದ್ಯಮಿಗಳು ಪಾಲ್ಗೊಂಡಿದ್ದು, ಇವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಮೂಲಕ ಉನ್ನತ ಮಟ್ಟದ ವ್ಯವಹಾರ ವೇದಿಕೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ಸಭೆಯನ್ನು 'ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಯುಎಇ' ಘಟಕವು ಆಯೋಜಿಸಿತ್ತು.

ಸೂಫಿ ಅನ್ವರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಕದ್ರಿ ವಂದಿಸಿದರು.