ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗೇರು ಅಥವಾ ಗೋಡಂಬಿ ಬೆಳೆ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲು ಗೇರು ಅಭಿವೃದ್ಧಿ ನಿಗಮಕ್ಕೆ 1 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.
ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ರವಿವಾರ ಗೇರು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಗೇರು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಂಡೋಸಲ್ಫಾನ್ ಅನಾಹುತದ ಬಳಿಕ ಹಲವು ರೈತರು ಗೇರು ಬೆಳೆಯಿಂದ ವಿಮುಖರಾಗಿದ್ದು, ಅವರಿಗೆ ಮತ್ತೆ ಉತ್ತೇಜನ ನೀಡಿ ಗೇರು ಬೆಳೆಯ ಗತವೈಭವ ಮರಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸಕ್ತ ರೈತರಿಗೆ ನಿಗಮದ ನರ್ಸರಿಗಳಲ್ಲೇ ಕಸಿ ಮಾಡಿದ ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ ಪೂರೈಸಲು ಸೂಚನೆ ನೀಡಲಾಗಿದೆ. 1 ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಗೇರು ಮೌಲ್ಯವರ್ಧನೆಗೆ ಒತ್ತು ನೀಡಿದರೆ ರೈತರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚಾಗಲಿದೆ. ರಾಜ್ಯದಲ್ಲಿ ಕಚ್ಚಾ ಗೇರು ಬೀಜ ಆಮದು ಮಾಡಿಕೊಂಡು ಸಂಸ್ಕರಿಸುವ ಸ್ಥಿತಿ ಇರುವುದರಿಂದ, ರೈತರಿಗೆ ಮಾಹಿತಿ ಹಾಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಿ ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಮಳೆಯ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮಹತ್ವದ್ದಾಗಿದೆ. ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ ಹಾಗೂ ಬೆಳೆ ಹಾನಿ ಹೆಚ್ಚಾಗುತ್ತಿರುವುದರಿಂದ ವೃಕ್ಷ ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕು ಎಂದು ಸಚಿವರು ಕರೆ ನೀಡಿದರು.
ಮೇಳದ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ 15 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್, ಕರಾವಳಿ ಭಾಗದ ಪಾಳುಬಿದ್ದ ಭೂಮಿಯಲ್ಲಿ ಗೇರು ಬೆಳೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಅಶೋಕ್ ರೈ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಅಭಯ ಚಂದ್ರ ಜೈನ್, ರಮಾನಾಥ ರೈ., ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎಸಿಎಫ್ ವಿ.ಕರಿಕಾಲನ್, ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್ ,ವಿವಿಧ ನಿಗಮದ ಅಧ್ಯಕ್ಷರಾದ ಎಂ.ಎ.ಗಫೂರ್, ಉಮ್ಮರ್ ಯು.ಎಚ್., ತಾರಾನಾಥ ಗಟ್ಟಿ,ಜೋಕಿಂ ಸ್ಟ್ಯಾನಿ ಅಲ್ವಾರೀಸ್ , ಟಿ.ಎಂ.ಶಾಹಿದ್ ತೆಕ್ಕಿಲ್, ಸದಾಶಿವ ಉಳ್ಳಾಲ್ , ಭರತ್ ಮುಂಡೋಡಿ, ಸದಾನಂದ ಮಾವಜಿ, ಶಾಲೆಟ್ ಪಿಂಟೊ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ., ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮನಪಾ ಆಯುಕ್ತ ರವಿಚಂದ್ರ ನಾಯಕ್, ಕರಾವಳಿ ಕಡಲ ತೀರ ವಲಯ ನಿರ್ವಹಣಾ ಸಮಿತಿ ಸದಸ್ಯ ಎ.ಕೆ.ಅನ್ಸಾಫ್ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸ್ವಾಗತಿಸಿದರು.
ಈ ಕಾರ್ಯಕ್ರಮಕ್ಕೂ ಮೊದಲು ಮಂಗಳೂರು ಪ್ರವಾಸ ಕೈಗೊಂಡಿರುವ ಸಚಿವ ಖಂಡ್ರೆ ಅವರನ್ನು ಎ.ಕೆ.ಅನ್ಸಾಫ್ ಅವರು ಸ್ವಾಗತಿಸಿದರು.







