ಮಂಗಳೂರು: ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಅವರು ಜೂ.23ರಂದು ಮಂಗಳವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
2010ರಲ್ಲಿ ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಕಾ ಉಸ್ತಾದ್, ದ.ಕ. ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಜಮಾಅತ್ ಗಳ ಖಾಝಿಯಾಗಿದ್ದರು. ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಚಿವ ಯು.ಟಿ. ಖಾದರ್ ಸಂತಾಪ
ದ.ಕ. ಜಿಲ್ಲಾ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಮುಸ್ಲಿಯಾರ್ ಅವರು ತಮ್ಮ ಜೀವನವನ್ನೆಲ್ಲಾ ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು. ಅವರ ಸರಳತೆ, ಆಳವಾದ ಜ್ಞಾನ ಹಾಗೂ ಸಮನ್ವಯದ ಮನೋಭಾವವು ಎಲ್ಲರಿಗೂ ಪ್ರೇರಣೆಯಾಗಿತ್ತು. ಅವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೂ ಅಪಾರ ನಷ್ಟವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಖಾದರ್ ತಿಳಿಸಿದ್ದಾರೆ.
