ಇಂದು ಬೀದರ್ ಜಿಲ್ಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ; ಯಾರೂ ಹಾರ, ತುರಾಯಿ, ಶಾಲು ಸತ್ಕಾರಗಳನ್ನು ಮಾಡಬೇಡಿ ಎಂದು ವಿನಂತಿ

ಬೀದರ್: ಮುಖ್ಯಮಂತ್ರಿಗಳಾದ DK ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮೊದಲ ಬಾರಿಗೆ ಜೂನ್ 14ರಂದು ಬೀದರ್ ಹಾಗೂ ಭಾಲ್ಕಿಗೆ ಸಚಿವ ಈಶ್ವರ್ ಬಿ.ಖಂಡ್ರೆ ಭೇಟಿ ನೀಡುತ್ತಿದ್ದಾರೆ. 

ಕೆಲಸದ ಒತ್ತಡದ ಕಾರಣ ಕಳೆದ ಹತ್ತು ದಿನಗಳಿಂದ ಬೀದರ್ ಜಿಲ್ಲೆಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ದೊರಕುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದ್ದಾರೆ. 

ನಾನು ಬೀದರ್‌ಗೆ ಆಗಮಿಸುವ ಸಂದರ್ಭದಲ್ಲಿ ದಯವಿಟ್ಟು ಯಾರೂ ಹಾರ, ತುರಾಯಿ, ಶಾಲು ಮುಂತಾದ ಸತ್ಕಾರಗಳನ್ನು ಮಾಡಬೇಡಿ ಎಂದು ವಿನಂತಿಸಿರುವ ಈಶ್ವರ್ ಬಿ.ಖಂಡ್ರೆ, ನಿಮ್ಮೆಲ್ಲರ ಪ್ರೀತಿ, ಅಭಿಮಾನ ನಮ್ಮ ಹೃದಯದಲ್ಲೇ ಅತ್ಯಂತ ದೊಡ್ಡ ಗೌರವವಾಗಿದೆ ಎಂದಿದ್ದಾರೆ.

ನಮ್ಮ ತಂದೆಯವರಿಗೆ, ನನಗೆ ಹಾಗೂ ನನ್ನ ಪುತ್ರ ಸಾಗರ ಖಂಡ್ರೆ ಅವರಿಗೆ ನೀವು ತೋರುತ್ತಿರುವ ಅಪಾರ ಪ್ರೀತಿ ಮತ್ತು ಆಶೀರ್ವಾದಕ್ಕೆ ನಮ್ಮ ಇಡೀ ಕುಟುಂಬ ಸದಾ ಆಭಾರಿಯಾಗಿರುತ್ತದೆ. ನಾನೇ ಸ್ವತಃ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ. ಅದೇ ರೀತಿ ಸಾರ್ವಜನಿಕರನ್ನೂ ನೇರವಾಗಿ ಸಂಪರ್ಕಿಸುತ್ತೇನೆ. ದಯವಿಟ್ಟು ಎಲ್ಲರೂ ಸಹಕರಿಸುವಂತೆ ಖಂಡ್ರೆ ವಿನಂತಿಸಿದ್ದಾರೆ.