ನವದೆಹಲಿ: ಗಲ್ಫ್ ಪ್ರದೇಶದಲ್ಲಿ ಅಮೆರಿಕದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ನೀಡಿರುವ ಹೇಳಿಕೆಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕವು ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ ನಡೆಸಿದ್ದ, ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ನಡುವೆಯೇ ಅಮೆರಿಕ ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಸೇನಾ ಆದೇಶಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಗೌರವವನ್ನು ಕಾಪಾಡಬೇಕಾದ ಪ್ರಧಾನಿಯೇ ಮೌನವಾಗಿದ್ದಾರೆ. ದೇಶವನ್ನು ಅವಮಾನಿಸುವವರ ಎದುರು ಅವರು ತಲೆಬಾಗುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ಮೂರು ಭಾರತೀಯ ನಾವಿಕರು ಅಮೆರಿಕದ ದಾಳಿಯಲ್ಲಿ ಸಾವನ್ನಪ್ಪಿದ ಕೆಲವೇ ದಿನಗಳ ಬಳಿಕವೂ ಅಮೆರಿಕ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆಯನ್ನೂ ಕೇಳಿಲ್ಲ. ಬದಲಾಗಿ ಭಾರತಕ್ಕೆ ಆದೇಶಗಳನ್ನು ನೀಡುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಅಮೆರಿಕದ ಭಾಷೆಯನ್ನು ನೋಡಿ. 'ಅಮೆರಿಕದ ಸೇನಾ ಆದೇಶಗಳನ್ನು ತಕ್ಷಣ ಪಾಲಿಸಿ' ಎಂದು ಹೇಳುತ್ತಿದೆ. ಸ್ವಾಭಿಮಾನಿ ರಾಷ್ಟ್ರವೊಂದು ಇಂತಹ ಭಾಷೆಯನ್ನು ಎಂದಿಗೂ ಸಹಿಸುವುದಿಲ್ಲ. ಆದರೆ, ನಮ್ಮ ಪ್ರಧಾನಿ ಮೌನವಾಗಿದ್ದಾರೆ. ಅವರು ವಿಧೇಯ ಸೇವಕರಂತೆ ಆದೇಶಗಳನ್ನು ಕೇಳಿ ಪಾಲಿಸುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ಜಿ7 ಶೃಂಗಸಭೆಯನ್ನು ಉಲ್ಲೇಖಿಸಿ ಮಾತನಾಡಿರುವ ಅವರು, "ಪ್ರಧಾನಮಂತ್ರಿಗಳು ಜಾಗತಿಕ ನಾಯಕರನ್ನು ಆಲಂಗಿಸಿ ಒಪ್ಪಂದಗಳಿಗೆ ಸಹಿ ಹಾಕುತ್ತಾರೆ. ಆದರೆ, ನಮ್ಮ ನಾವಿಕರ ಸಾವಿಗೆ ಅಮೆರಿಕಾವನ್ನು ಹೊಣೆಗಾರರನ್ನಾಗಿ ಮಾಡಲು ಅವರು ಸಂಪೂರ್ಣ ವಿಫಲರಾಗಿದ್ದಾರೆಂದು ಕಿಡಿಕಾರಿದ್ದಾರೆ.
