ಗುಜರಾತ್ ಚುನಾವಣೆಯಲ್ಲಿ ಗೆದ್ದವರಲ್ಲಿ ಶೇ.83 ರಷ್ಟು ಮಂದಿ ಕೊಟ್ಯಾಧೀಶರು!
Monday, December 12, 2022
ಅಹ್ಮದಾಬಾದ್(Headlines Kannada): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಆಯ್ಕೆಯಾಗಿರುವ ಶಾಸಕರ ಪೈಕಿ ಶೇ.83 ರಷ್ಟು ಮಂದಿ ಕೊಟ್ಯಾಧೀಶರಾಗಿದ್ದಾರೆ.
2017 ರಲ್ಲಿ ಆಯ್ಕೆಯಾದವರಲ್ಲಿ 141 ಮಂದಿ ಶಾಸಕರು ಕೊಟ್ಯಾಧೀಶರಾಗಿದ್ದರು. ಈ ಬಾರಿ 182 ಶಾಸಕರ ಪೈಕಿ 151 ಮಂದಿ ಕನಿಷ್ಠ 1 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದು, ಈ ಅಂಕಿ-ಅಂಶ 2017 ಕ್ಕಿಂತ ಹೆಚ್ಚಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ಪ್ರಕಟಿಸಿದೆ.
ಈ ಅಧ್ಯಯನ ವರದಿಯಂತೆ 182 ಶಾಸಕರ ಪೈಕಿ ಬಿಜೆಪಿ 132 ಕೋಟ್ಯಾಧಿಪತಿ ಶಾಸಕರಿದ್ದು, ಕಾಂಗ್ರೆಸ್ ನಲ್ಲಿ 14 ಮಂದಿ ಕೋಟ್ಯಾಧಿಪತಿ ಶಾಸಕರಿದ್ದಾರೆ. ಆಪ್ ಪಕ್ಷದಲ್ಲಿ ಹಾಗೂ ಸಮಾಜವಾದಿ ಪಕ್ಷದಲ್ಲಿ ತಲಾ ಒಬ್ಬರು ಕೋಟ್ಯಾಧಿಪತಿ ಶಾಸಕರಿದ್ದಾರೆ.
151 ಕೋಟ್ಯಾಧಿಪತಿ ಶಾಸಕರ ಪೈಕಿ 73 ಮಂದಿ 5 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದರೆ, ಬಾಕಿ ಉಳಿದ 73 ಮಂದಿ 2 ಕೋಟಿಯಿಂದ 5 ಕೋಟಿ ವರೆಗೆ ಆಸ್ತಿ ಹೊಂದಿದ್ದಾರೆ. ಗುಜರಾತ್ ನಲ್ಲಿ ಈ ಬಾರಿ ಗೆದ್ದಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ 16.41 ಕೋಟಿ ರೂಪಾಯಿಗಳಷ್ಟಿದ್ದು, 2017 ರಲ್ಲಿ 8.46 ಕೋಟಿ ರೂಪಾಯಿ ಇತ್ತು ಎಂದು ವರದಿ ಹೇಳಿದೆ.