'ನಮೋ' ಎಂದರೆ 'ನಮಗೆ ಮೋ#ಸ' ಎಂದಿದ್ದ ಮಧ್ವರಾಜ್'ರಿಂದ BJP ಟಿಕೇಟಿಗಾಗಿ ಅವಕಾಶವಾದಿ ರಾಜಕಾರಣ: ರಮೇಶ್ ಕಾಂಚನ್ ಆಕ್ರೋಶ

'ನಮೋ' ಎಂದರೆ 'ನಮಗೆ ಮೋ#ಸ' ಎಂದಿದ್ದ ಮಧ್ವರಾಜ್'ರಿಂದ BJP ಟಿಕೇಟಿಗಾಗಿ ಅವಕಾಶವಾದಿ ರಾಜಕಾರಣ: ರಮೇಶ್ ಕಾಂಚನ್ ಆಕ್ರೋಶ

ಉಡುಪಿ(Headlines Kannada): "ನಮೋ" ಎಂದರೆ 'ನಮಗೆ ಮೋ#ಸ' ಎಂದು ಹೇಳಿದ್ದ ಪ್ರಮೋದ್ ಮಧ್ವರಾಜ್ ಅವರು ಇಂದು ಬಿಜೆಪಿಯ ಟಿಕೆಟ್ ದಕ್ಕಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದು ಅವಕಾಶವಾದದ ರಾಜಕಾರಣವನ್ನು ನಡೆಸುತ್ತಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಬಾರಿ ಖಾಸಗಿ ಪತ್ರಿಕೆಯೊಂದರ ಸಮೀಕ್ಷೆಯ‌ಲ್ಲಿ ರಾಜ್ಯಕ್ಕೆ ನಂಬರ್ ಒನ್ ಶಾಸಕನಾಗಿ ಮೂಡಿ ಬಂದರೂ ಬಿಜೆಪಿಯ ಕಾರ್ಯಕರ್ತರು ಸೋಲಿಸಿದ್ದಾರೆ. ನನಗೆ ಕಿಂಚಿತ್ತೂ ಬೇಸರವಿಲ್ಲ. ಮೋದಿಯವರ ಕೈ ಬಲಪಡಿಸಲು ನನ್ನನ್ನು ಸೋಲಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಇವರ ಅವಕಾಶವಾದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರಿಗೆ ಕಾಂಗ್ರೆಸ್ ಪಕ್ಷವು ಐದು ಭಾರೀ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಹಲವು ಬಾರಿ ಸೋತ ಹೊರತಾಗಿಯೂ ಕಾಂಗ್ರೆಸ್ ಪಕ್ಷ ಅವರ ಕೈ ಬಿಟ್ಟಿರಲಿಲ್ಲ. 2013ರಲ್ಲಿ ಗೆಲುವು ಸಾಧಿಸಿದಾಗ ಅವರನ್ನು ರಾಜ್ಯ ನಾಯಕರನ್ನಾಗಿ ಬೆಳೆಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಅವರಿಗೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ, ಸಚಿವರಾಗಿ, ನಂತರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸ್ಥಾನ‌ಮಾನ ನೀಡಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ನಾಯಕರು ಹಾಗೂ ಕಾರ್ಯಕರ್ತರು ಪ್ರಮೋದ್ ಮಧ್ವರಾಜ್ ಅವರ ಗೆಲುವಿಗಾಗಿ ಹಗಲಿರುಳು ದುಡಿದಕ್ಕಾಗಿ ಅವರು ಆ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಆದರೆ ಅವರು ಯಾರ ಬಳಿಯೂ ಚರ್ಚಿಸದೇ, ಯಾರ ಬಳಿಯೂ ತಿಳಿಸದೆ, ಅವರ ಗೆಲುವಿಗಾಗಿ ಶ್ರಮಿಸಿದ ನಾಯಕರ ಹಾಗೂ ಕಾರ್ಯಕರ್ತರ ಭಾವನೆಗೆ ಬೆಲಯೂ ಕೊಡದೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ.

ಇದೀಗ ಬಿಜೆಪಿಯ ನಾಯಕರನ್ನು, ಬಿಜೆಪಿಯ ಕಾರ್ಯಕರ್ತರನ್ನು ಒಲೈಸಲು, ಬಿಜೆಪಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇವರ ಈ  ಅವಕಾಶವಾದಿ ರಾಜಕಾರಣ ಜನರಿಗೆ ಅರ್ಥವಾಗಿದ್ದು ಮುಂದಿನ ದಿನಗಳಲ್ಲಿ ಜನರೇ ಪ್ರಮೋದ್ ಮಧ್ವರಾಜ್ ಅವರಿಗೆ ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article