18 ವರ್ಷ ಮೇಲ್ಪಟ್ಟವರು ಕೋವಿಡ್ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯುವುದು ಅಗತ್ಯ: ಡಾ. ನಾಗಭೂಷಣ್ ಉಡುಪ
ಉಡುಪಿ (Headlines Kannada): ಚೀನಾ, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಯು.ಎಸ್.ಎ ಹಾಗೂ ಬ್ರೆಝಿಲ್ ದೇಶಗಳಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟವರಲ್ಲಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 6 ತಿಂಗಳು ದಾಟಿದವರು ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಲಸಿಕೆ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿರುವ 15 ರಿಂದ 17 ವರ್ಷ ಪ್ರಾಯದ ಶಾಲಾ ಮಕ್ಕಳಲ್ಲಿ ಕೋವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇದ್ದಲ್ಲಿ ಸಂಬಂಧಪಟ್ಟ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಲಸಿಕೆ ಪಡೆಯಬೇಕು.
ಪ್ರಸ್ತುತ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಮಾತ್ರ ಲಭ್ಯವಿದ್ದು, ಕೋವಿಶೀಲ್ಡ್ ಲಸಿಕೆಯು ಲಭ್ಯವಿರುವುದಿಲ್ಲ. ಕೋವಿಶೀಲ್ಡ್ ಲಸಿಕೆಯು ಜಿಲ್ಲೆಗೆ ಸರಬರಾಜಾದ ತಕ್ಷಣ ಮಾಹಿತಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.