
ಮಂಗಳೂರು ಉತ್ತರ ಕ್ಷೇತ್ರದ ಕೈ ಟಿಕೇಟಿಗಾಗಿ ಭಾರೀ ಪೈಪೋಟಿ; ಬಾವ-ಇನಾಯತ್ ಅಲಿ ನಡುವೆ ಬಿರುಕು ಮೂಡಿಸಲು ತೆರೆಮರೆಯಲ್ಲಿ ಕಸರತ್ತು !
ಮಂಗಳೂರು(Headlines Kannada): ಮುಂಬರುವ ಚುನಾವಣೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಬಾರಿ ಪೈಪೋಟಿ ಶುರುವಾಗಿದೆ. ಇದೀಗಾಗಲೇ ಟಿಕೆಟ್ ಆಕಾಂಕ್ಷಿಗಳಾಗಿ ಹಲವರು ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಬಹುಮುಖ್ಯವಾಗಿ ಮಾಜಿ ಶಾಸಕ ಮೊಹಿದೀನ್ ಬಾವ ಹಾಗೂ ಸಮಾಜಸೇವಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಹೆಸರು ಮಂಚೂಣಿಯಲ್ಲಿದೆ.
ಈ ನಡುವೆ ಈ ಇಬ್ಬರೂ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ಪರಸ್ಪರ ವೇದಿಕೆ ಹಂಚಿಕೊಂಡು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಹಾಗೂ ಇಬ್ಬರೂ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ, ಪಕ್ಷ ಘೋಷಿಸಿದ ಅಭ್ಯರ್ಥಿಯ ಪರವಾಗಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಪಕ್ಷದ ವೇದಿಕೆಗಳಲ್ಲಿ ಸಾರ್ವಜನಿಕವಾಗಿ ಹೇಳಿಕೆಯನ್ನೂ ನೀಡುತ್ತಿದ್ದಾರೆ.
ಈ ನಡುವೆ ಬಾವ ಅವರ ಹೆಸರಲ್ಲಿ, ಬಾವ ಅವರ ಬೆಂಬಲಿಗರು ಎಂದು ಹೇಳಿಕೊಂಡು ಕೆಲವರು ಟಿಕೆಟ್ ಆಕಾಂಕ್ಷಿ ಇನಾಯತ್ ಅಲಿ ಅವರ ಬಗ್ಗೆ ಜಾಲತಾಣದಲ್ಲಿ ಬಾರಿ ತೇಜೋವಧೆ ನಡೆಸುತ್ತಿದ್ದು, ಇದೀಗ ಅದರ ಹಿಂದಿರುವ ಮೂಲಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಈ ಇಬ್ಬರ ನಡುವೆ ಪರಸ್ಪರ ಬಿರುಕು ಸೃಷ್ಟಿಸಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಅನ್ಯ ಪಕ್ಷಗಳ ಬೆಂಬಲಿಗರು ವ್ಯವಸ್ಥಿತವಾಗಿ ಕೆಲಸ ನಿರ್ವಸುತ್ತಿರುವಂತೆ ಎದ್ದು ಕಾಣುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್ ಮುಖಂಡ ಎಂಬ ಹೆಸರಲ್ಲಿ ಯಾಕೂಬ್ ಗುರುಪುರ ಎಂಬವರ ವಾಯ್ಸ್ ಅನ್ನು ಕೆಲವರು ವೈರಲ್ ಮಾಡುತ್ತಿದ್ದು, ಈ ಬಗ್ಗೆ ಗುರುಪುರ ಬ್ಲಾಕ್ ಕಾಂಗ್ರೆಸ್ ನ ಹಿರಿಯ ಪದಾಧಿಕಾರಿಗಳಲ್ಲಿ ವಿಚಾರಿಸಿದಾಗ ಯಾಕೂಬ್ ಅವರು ನಮ್ಮ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯೂ ಅಲ್ಲ, ಇದುವರೆಗೆ ಬ್ಲಾಕ್ ಕಛೇರಿಯಲ್ಲಿ ನಾವು ನೋಡಿಯೂ ಇಲ್ಲ, ಹೆಸರು ಕೇಳಿಯೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವ ಕೊಡುಗೈ ದಾನಿ, ಸಮಾಜಸೇವಕ ಎಂದೇ ಹೆಸರಾಗಿರುವ ಇನಾಯತ್ ಅಲಿ ಅವರು ವರ್ಷಗಳಿಂದ ಕ್ಷೇತ್ರದ ಕಾರ್ಯಕರ್ತರ, ಮತದಾರರ ನಿಕಟ ಸಂಪರ್ಕವನ್ನು ಹೊಂದಿದ್ದು, ಕ್ಷೇತ್ರದಾದ್ಯಂತ ಸಂಚರಿಸಿ ತನ್ನನ್ನು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಹಾಗೂ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲೂ ಪಕ್ಷ, ಜಾತಿ, ಧರ್ಮ ಭೇದವಿಲ್ಲದೆ ಸ್ಪಂದಿಸುತ್ತಿದ್ದಾರೆ.
ಪಕ್ಷದಿಂದ ನಿರಂತರವಾಗಿ ಮೂರು ಬಾರಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿರುವ ಮೊಹಿದೀನ್ ಬಾವ ಅವರು ಕೂಡ ನಾಲ್ಕನೇ ಬಾರಿಗೆ ಟಿಕೆಟ್ ಪಡೆಯಲು ಬಾರಿ ಕಸರತ್ತು ಮುಂದುವರಿಸುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ಬಾರಿ ಸೋತ ಬಳಿಕ ತನ್ನನ್ನು ಅಷ್ಟೇನೂ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಅವರು ಇದೀಗ ದಿಢೀರ್ ಪ್ರತ್ಯಕ್ಷರಾಗಿ ಕ್ಷೇತ್ರ ಸುತ್ತಾಡುತ್ತಿದ್ದಾರೆ.
ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ಲಭಿಸಿದರೂ ಗೆಲುವಿಗಾಗಿ ಸಮಾನವಾಗಿ ಕೆಲಸ ಮಾಡುತ್ತೇವೆ ಎಂದು ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬ ಕುತೂಹಲ ಕೈ ಕಾರ್ಯಕರ್ತರಿಗೆ ಮೂಡಿದೆ.