ಹೊಸ ಪಕ್ಷದ ಘೋಷಣೆ ಮಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ; ಬಿಜೆಪಿಯಲ್ಲಿ ಆತಂಕ !
ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಣೆ ಮಾಡಿದರು.
ಜನಾರ್ದನ ರೆಡ್ಡಿ, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿರುವುದು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಈ ಬಾರಿ ಬಿಜೆಪಿಗೆ ಈ ಪಕ್ಷ ದೊಡ್ಡ ಹೊಡೆತ ನೀಡುವುದು ಖಚಿತವಾಗಿದೆ. ಹೊಸ ಪಕ್ಷ ಘೋಷಣೆ ರಾಜ್ಯ ರಾಜಕಾರಣದಲ್ಲಿ ಸಂಚಲನಮೂಡಿಸಿದೆ. ಅಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಕ್ಷೇತ್ರವನ್ನು ಸಹ ಘೋಷಿಸಿದ್ದಾರೆ. ಈ ಮೂಲಕ ರಾಜಕೀಯ ವಲಯದಿಂದ ಕಣ್ಮರೆಯಾಗಿದ್ದ ಜನಾರ್ದನ ರೆಡ್ಡಿ, ಈಗ ರಾಜಕೀಯದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.
ನಾನು ಈ ಬಾರಿಯ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಮುಂದಿನ 15 ದಿನಗಳ ಒಳಗೆ ಪಕ್ಷದ ಲಾಂಛನ, ಕಚೇರಿ ಎಲ್ಲವೂ ಬಿಡುಗಡೆ ಮಾಡುತ್ತೇನೆ. ನನ್ನ ಪತ್ನಿಯೂ ಸಾಥ್ ನೀಡಲಿದ್ದು, ಸಾರ್ವಜನಿಕ ಬದುಕಿನಲ್ಲಿ ಇನ್ನು ಗುರುತಿಸಿಕೊಳ್ಳುತ್ತಾಳೆ ಎಂದು ಸ್ಪಷ್ಟಪಡಿಸಿದರು.
ನಮ್ಮ ರಾಜ್ಯದ ಅಭಿವೃದ್ಧಿ-ಪ್ರಗತಿಯೇ ನನ್ನ ಗುರಿ. ಈ ಹಿನ್ನೆಲೆಯಲ್ಲಿ ಜನರು ಮೆಚ್ಚುವ ಕೆಲಸ ಮಾಡುತ್ತೇನೆ. ನನ್ನನ್ನು ಸರ್ಕಾರ ಟಾರ್ಗೇಟ್ ಮಾಡುತ್ತಿದೆ, ಮುಂದೆಯೂ ಮಾಡುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲೆಲ್ಲಿ ಸ್ಪರ್ಧೆ ಮಾಡಬಹುದು ಎಂದು ಪಕ್ಷದ ಪ್ರಣಾಳಿಕೆಯೊಂದಿಗೆ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ ಎಂದು ರೆಡ್ಡಿ ಹೇಳಿದರು.