
‘ಪಠಾಣ್’ ದೇಶಭಕ್ತಿ ಸಾರುವ ಚಿತ್ರ ಎಂದ ಶಾರುಖ್ ಖಾನ್
ಮುಂಬೈ (Headlines Kannada): ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರ ಬಲಪಂಥೀಯ ಸಂಘಟನೆಗಳಿಂದಾಗಿ ವಿವಾದದ ಸುಲಿಗೆ ಸಿಕ್ಕಿದ್ದು, ಈ ಬಗ್ಗೆ ನಟ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿದ್ದು, ‘ಪಠಾಣ್’ ದೇಶಭಕ್ತಿ ಸಾರುವ ಚಿತ್ರ ಎಂದಿದ್ದಾರೆ.
ಶನಿವಾರ ಟ್ವಿಟರ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಮುಂಬರುವ ನನ್ನ ಸಿನೆಮಾ ದೇಶಭಕ್ತಿಯಿಂದ ಕೂಡಿದೆ ಎಂದರು. ಚಿತ್ರವು ದೇಶಭಕ್ತಿಯದ್ದಾಗಿದೆಯೇ ಎಂದು ಫ್ಯಾನ್ಸ್ ಒಬ್ಬರು ಕೇಳಿದ ಪ್ರಶ್ನೆಗೆ, ‘ಪಠಾಣ್ ಕೂಡ ತುಂಬಾ ದೇಶಪ್ರೇಮಿ, ಆದರೆ ಆಕ್ಷನ್ ರೀತಿಯಲ್ಲಿ’ ಎಂದು ಮರು ಉತ್ತರ ನೀಡಿದ್ದಾರೆ.
ಇತ್ತೀಚಿಗೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಪಠಾಣ್’ ಚಿತ್ರದ ಹೆಸರು ಎತ್ತದೆ ವಿವಾದದ ಕುರಿತಾಗಿ ತಿರುಗೇಟು ನೀಡಿದ್ದ ಶಾರುಖ್ ಖಾನ್, ‘ಜಗತ್ತು ಸಹಜ ಸ್ಥಿತಿಗೆ ಬಂದಿದ್ದು, ನಾವೆಲ್ಲರೂ ಖುಷಿಯಾಗಿದ್ದೇವೆ. ನಾವೆಲ್ಲರೂ ಮತ್ತು ಪಾಸಿಟಿವ್ ಮನಸ್ಥಿತಿ ಇರುವ ಎಲ್ಲ ಜನರು ಜೀ#ವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ ಎಂದಿದ್ದರು.
ಬರುವ ತಿಂಗಳ ಜನವರಿ 25ರಂದು ‘ಪಠಾಣ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಮೂಲಕ ಚಿತ್ರ ನಿರ್ಮಾಣ ಆಗಿದೆ. ಏನೇ ವಿರೋಧ ವ್ಯಕ್ತವಾಗಿದ್ದರೂ ಈ ಚಿತ್ರದ ‘ಬೇಷರಂ ರಂಗ್..’ ಹಾಡು ಧೂಳೆಬ್ಬಿಸುತ್ತಿದೆ. 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ಬಾಲಿವುಡ್'ನಲ್ಲಿ ಸದ್ದು ಮಾಡುತ್ತಿದೆ.