
ಜ.20ರಂದು ಕರಾವಳಿಯಾದ್ಯಂತ "ಶಕಲಕ ಬೂಮ್ ಬೂಮ್" ತುಳುಚಿತ್ರ ಬಿಡುಗಡೆ: ನಿತ್ಯಾನಂದ ನಾಯಕ್ ನರಸಿಂಗೆ
ಉಡುಪಿ(Headlineskannada): ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳುಚಿತ್ರ ಇದೇ ಬರುವ ಜ.20ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಸುರತ್ಕಲ್, ಮಂಗಳೂರು, ಪಡುಬಿದ್ರಿ, ಪುತ್ತೂರು, ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿ, ಕಾರ್ಕಳ ಸಹಿತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನೆಮಾ ತೆರೆಕಾಣಲಿದೆ ಎಂದರು.
ಜನರನ್ನು ಮೋಸ ಮಾಡುತ್ತಾ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ. ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರವನ್ನು ಚಿತ್ರ ಹೊಂದಿದೆ ಎಂದು ನಿರ್ದೇಶಕ ಶ್ರೀಶ ಎಳ್ಳಾರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಅಭಿಲಾಷ್ ಪೂಜಾರಿ ದೆಂದೂರುಕಟ್ಟೆ, ರಾಜೇಶ್ವರಿ ಕುಲಾಲ್, ಶ್ರುತಿನ್ ಶೆಟ್ಟಿ ಇದ್ದರು.