ನನ್ನೂರು ಕೈರಂಗಳದಲ್ಲಿ ಆತ್ಮಸ್ಪರ್ಶ ಸನ್ಮಾನ ...!
ಆಡಿ ಬೆಳೆದ, ಓಡಿ ನಲಿದ ಹುಟ್ಟೂರಿಗೆ ಕಾಲಿಡುವಾಗ ಉಂಟಾಗುವ ಹೃದಯಮಿಡಿತ ಅನಿರ್ವಚನೀಯ. ಎಲ್ಲಾ ಮನುಷ್ಯರಿಗೂ ಜನ್ಮನಾಡಿನ ಹೃದಯಸ್ಪರ್ಶದಲ್ಲಿ ತಾಯ ಮಡಿಲಿನ ನಾಡಿಮಿಡಿತವಿದೆ. ತುಂಬಾ ಕಾಲ ಕಾಣದ ಅಮ್ಮನನ್ನು ಕಂಡಾಗ ಉಂಟಾಗುವ ಅದೇ ಮನಮಿಡಿತ.
ನನ್ನೂರು ಕೈರಂಗಳ ನನ್ನ ಪಾಲಿಗೆ " ಖೈರ್ ಅಂಗಳ". ನನ್ನ ಕೈರಂಗಳ ನಾಡಿನ ಆತ್ಮಮಿತ್ರರು, ಬಂಧುಗಳು, ಬಾಲ್ಯದ ಗೆಳೆಯರು ಒಟ್ಟು ಸೇರಿ ಪ್ರೀತಿ ವಿಶ್ವಾಸ, ಗೌರವ ಕೊಟ್ಟು ಸನ್ಮಾನಿಸಿದಾಗ ನನಗುಂಟಾದ ಅನುಭವವೇ ಬೇರೆ. ಸನ್ಮಾನ ಹಲವು ಕಡೆ ನಡೆದಿದೆ, ನಡೆಯುತ್ತಲೂ ಇದೆ. ಆದರೆ ತಾಯ್ನಾಡಿನಲ್ಲಿ ಬಾಲ್ಯದ ಮಿತ್ರರ ಪ್ರೀತಿಯ ಸಿಂಚನ ಹರಿಸಿ ನನಗೆ ನೀಡಿದ ಈ ಒಂದು ಸನ್ಮಾನ ಇದೆಯಲ್ಲಾ? ನಿಜಕ್ಕೂ ರೋಮಾಂಚಕಾರಿ! ಈ ಅನುಭೂತಿ ಬೇರೆ ಯಾವ ಕಡೆಯ ಸನ್ಮಾನದಲ್ಲೂ ಸಿಗಲಿಲ್ಲ. ಸಿಗಲು ಸಾಧ್ಯವೂ ಇಲ್ಲ.
ನಾನೇರಿದೆತ್ತರಕೆ ನೀನೇರಬಲ್ಲೆಯಾ ಎಂದು ಸವಾಲೆಸೆಯುತ್ತಾ ಬಾನೆತ್ತರಕ್ಕೆ ತಲೆಯೆತ್ತಿ ನಿಂತಿರುವ ಮುಡಿಪು ಪರ್ವತ. ಅದರ ಕೊಳ್ಳದಲ್ಲಿ ಕಂಗೊಳಿಸುವ ಪ್ರಾಕೃತಿಕ, ಕೃತಕ ಹಸಿರು ವನರಾಜಿ, ಆ ಕೊಳ್ಳದಿಂದ ಈಚೆ ಕಡೆ ಎತ್ತರದಲ್ಲಿರು ಪದವು ಪ್ರದೇಶವೇ ಕೈರಂಗಳ ಪೇಟೆ.
ಈ ಪೇಟೆಯ ಹೃದಯಭಾಗದಲ್ಲಿ ನನ್ನ ತಂದೆಯವರ ದಿನಸಿ ಅಂಗಡಿ. ಅದೇ ಕಟ್ಟಡದಲ್ಲಿ ನಮ್ಮ ಮನೆ. ರಸ್ತೆಯ ಆಚೆ ಕಡೆ ಎದುರಲ್ಲಿ ಶಾಲೆ. ಆಸುಪಾಸಿನಲ್ಲಿ ಹಿಂದೂ ಮುಸ್ಲಿಮ್ ಮನೆಗಳು. ಬೇಧಭಾವ ಗೊತ್ತೇ ಇಲ್ಲದ ಊರವರು. ಈಗ ಅದೆಲ್ಲ ನೆನಪು ಮಾತ್ರ.
ಪತ್ರಿಕೋದ್ಯಮದ ನಿಮಿತ್ತ ಊರು ಬಿಟ್ಟು ನಾಡಿನಿಂದ ದೂರ ದೂರ ಆಗಿ ಕ್ರಮೇಣ ನಾಡನ್ನೇ ತೊರೆದು ಕುಟುಂಬ ಸಮೇತ ದೇರಳಕಟ್ಟೆ ಸಮೀಪ ಮನೆ ಮಾಡಿಕೊಂಡು ವಾಸವಾರಂಭಿಸಿದ ನಂತರವಂತೂ ಕೈರಂಗಳ ಎಂಬ ನನ್ನ ಪ್ರೀತಿಯ ಹುಟ್ಟೂರು ನನಗೆ ಅನ್ಯವಾಯಿತು.
ನಾನು ಜನರಲ್ ಮ್ಯಾನೇಜರ್ ಆಗಿರುವ ಆಕ್ಸಿಬ್ಲೂ ಕುಡಿಯುವ ನೀರಿನ ಕಂಪೆನಿಯ ಕ್ರೀಡಾ ತಂಡ ಮತ್ತು ಬ್ರದರ್ಸ್ ಕೈರಂಗಳ ತಂಡದವರ ಜಂಟಿ ಆಯೋಗದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ, ಉದ್ಘಾಟಕನಾಗಿ ತೆರಳಿದ್ದ ನನಗೆ ನನ್ನೂರ ಆಪ್ತರು ಸನ್ಮಾನ ನೀಡಿ ನನಗೆ ತೋರಿದ ಪ್ರೀತಿಯನ್ನು ಮರೆಯಲಸಾಧ್ಯ.
ಬಾಲ್ಯದ ಆಟ ಪಾಠಗಳಲ್ಲಿ ಜತೆಯಾಗಿದ್ದ ಅನೇಕರು ಈಗ ಬೆಳೆದು ನಾನಾ ಕ್ಷೇತ್ರಗಳಲ್ಲಿ ಎತ್ತರಕ್ಕೇರಿದ್ದಾರೆ. ಅವರೊಡನೆ ಬೆರೆಯುವ ಕ್ಷಣಗಳು ಅಪೂರ್ವ ಆನಂದ ತರುವಂತಹದ್ದು. ನನ್ನೂರಿನವರೇ ಆಗಿದ್ದು
ಗಲ್ಫ್ ನಲ್ಲಿ ಉದ್ಯಮಿಯಾಗಿ ಹೆಸರುವಾಸಿಯಾದ ರಝಾಕ್ ಹಾಜಿ, ಯುವ ರಾಜಕೀಯ ನಾಯಕ ಹೈದರ್ ಕೈರಂಗಳ, ಖ್ಯಾತ ಕ್ರೀಡಾ ಸಂಘಟಕ ಶ್ರೀ ರವೀಂದ್ರ ಅಂಕದಕಲ, ಯುವ ನ್ಯಾಯವಾಧಿ ಶ್ರೀ ಆಸ್ಕರ್ ಮುಡಿಪು, ಜಲ್ಲಿ ಅಬೂಬಕರ್, ಫಾರೂಕ್ ತೋಟಾಲ್, ಸತ್ತಾರ್ ಕೈರಂಗಳ, ಉತ್ತಮ ಕ್ರೀಡಾಪಟು ನಿಖಿಲ್, ರಿತಿಷ್, ಶ್ರೀಕೃಷ್ಣ ಗೇಮ್ಸ್ ಕ್ಲಬ್ ಅಧ್ಯಕ್ಷರಾದ ಅರುಣ್ ಡಿ. ಸೋಜಾ, ಕಾರ್ಯದರ್ಶಿ ಮೋಹನ್ ಕೈರಂಗಳ, ವಾಲಿಬಾಲ್ ಕ್ರೀಡಾಕೂಟವನ್ನು ಸಂಘಟಿಸಿದ ಯುವ ಆಟಗಾರ ಖಲೀಲ್ ಕೈರಂಗಳ ಮುಂತಾದವರು ಹಾಗೂ ಊರಿನ ನಾನು ಪ್ರೀತಿಸುವ, ನನ್ನನ್ನು ಪ್ರೀತಿಸುವ ಎಲ್ಲಾ ಹಿರಿಯ- ಕಿರಿಯರೊಡನೆ ಬೆರೆಯುವ ಸಂದರ್ಭವು ಮನಸ್ಸಿಗೆ ತುಂಬಾ ಮುದ ನೀಡಿತ್ತು. ಜಾತಿ, ಧರ್ಮ ಬೇಧಗಳು ಕೆಲವು ಗೋಧಿ ಮಾಧ್ಯಮಗಳಲ್ಲಿ ಮಾತ್ರವೇ ಹೊರತು ಜನಜೀವನದಲ್ಲಿ ಇಲ್ಲ, ಎಲ್ಲರೂ ಸಾಮರಸ್ಯವನ್ನೇ ಇಷ್ಟಪಡುವವರು ಎನ್ನುವುದಕ್ಕೆ ಇಂತಹ ಕ್ರೀಡಾಕೂಟಗಳು, ಸನ್ಮಾನ ಸಂಗಮಗಳು ಸಾಕ್ಷಿಗಳಾಗಿವೆ. ಈ ಸುಮಧುರ ವಾತಾವರಣ ಎಂದೆಂದಿಗೂ ಈ ದೇಶದಲ್ಲಿ ನೆಲೆಸಲಿ.
- ಡಿ. ಐ. ಅಬೂಬಕರ್ ಕೈರಂಗಳ