
ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದು ತೇಜಸ್ವಿ ಸೂರ್ಯ ಎಂದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ: ಘಟನೆ ಬಗ್ಗೆ ಹೇಳಿದ್ದೇನು..?
ನವದೆಹಲಿ: ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ವಿಪಕ್ಷಗಳು ಆಕ್ರೋಶ, ಟೀಕೆ ಮಾಡಿದ್ದು, ಜೊತೆಗೆ ಭಾರೀ ಟ್ರೋಲ್ ಕೂಡ ಮಾಡಲಾಗಿದೆ.
ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ವಿಮಾನ ಹತ್ತಿದ ನಂತರ ಆಕಸ್ಮಿಕವಾಗಿ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದರು ಎಂದು ಇಂಡಿಗೋ ಮಂಗಳವಾರ ಹೇಳಿತ್ತು. ಆದರೆ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಈ ಮಧ್ಯೆ ಬುಧವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿಕೆಯೊಂದನ್ನು ನೀಡಿದ್ದು, 'BJP ನಾಯಕ ತೇಜಸ್ವಿ ಸೂರ್ಯ ಅವರು ಕಳೆದ ತಿಂಗಳು ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ತೆರೆದಿದ್ದು ನಂತರ ಕ್ಷಮೆಯಾಚಿಸಿದ್ದಾರೆ ಎಂದಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನವು ಹಾರಲು ಸಿದ್ಧತೆ ನಡೆಸುತ್ತಿದ್ದಾಗ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕನೊಬ್ಬ ತನ್ನ ವಿಮಾನ 6E 7339 (ಚೆನ್ನೈ ನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ ವಿಮಾನ)ದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ತೆರೆದಿದ್ದು, ಆನಂತರ ಆ ಪ್ರಯಾಣಿಕ ಕ್ಷಮೆಯಾಚಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಡಿಸೆಂಬರ್ 10 ರಂದು ತಿಳಿಸಿದೆ. ಹೀಗೆ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ ತೇಜಸ್ವಿ ಸೂರ್ಯ ಎಂದು ಘಟನೆ ನಡೆದು 1 ತಿಂಗಳ ನಂತರ ವಿಮಾನಯಾನ ಸಚಿವರು ಇದನ್ನು ಖಚಿತಪಡಿಸಿದ್ದಾರೆ.
ಇದು ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ಆಗುವ ಮುನ್ನ ನಡೆದಿದ್ದು, ಘಟನೆ ಸಂಭವಿಸಿದ ನಂತರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಆ ಬಗ್ಗೆ ವರದಿ ಮಾಡಿದ್ದಾರೆ. ಬಳಿಕ ಅದರ ಆಧಾರದ ಮೇಲೆ ಸಂಪೂರ್ಣ ಪ್ರೋಟೋಕಾಲ್ ಅನ್ನು ಅನುಸರಿಸಲಾಗಿದೆ. DGCA ಸ್ವತಃ ತನಿಖೆ ಮಾಡಿದ ನಂತರ ವಿಮಾನ ಟೇಕ್ ಆಫ್ ಆಗಿದೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕ್ಷಮೆಯಾಚಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.