ಬೆಳಗಾವಿ ಜಿಲ್ಲಾಧಿಕಾರಗಳ ಕಚೇರಿಯಲ್ಲಿಯೇ ತನ್ನ ಮೂವರು ಮಕ್ಕಳಿಗೆ ಫಿನೈಲ್ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಬೆಳಗಾವಿ: ಸಾಲಗಾರರ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳಿಗೆ ಫಿನೈಲ್ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಬುಧವಾರ ನಡೆದಿದೆ.
ಬೆಳಗಾವಿಯ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40), ಅವರ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ಪಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರೂ ಅಸ್ವಸ್ಥಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇಂದು ಸರಸ್ವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ತಿಳಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿಯ ಅನಗೋಳದಲ್ಲಿ ಸರಸ್ವತಿ ಪತಿ ಅದೃಶ್ಯಪ್ಪ ಹಂಪಣ್ಣನವ ಸಲೂನ್ ಶಾಪ್ ಒಂದನ್ನು ಇಟ್ಟುಕೊಂಡಿದ್ದು, ಬೇರೆ ಬೇರೆಯವರ ಕೈಯಲ್ಲಿ ಸಾಲ ಪಡೆದಿದ್ದರು. ಸಾಲಗಾರರ ಕಿರಿಕಿರಿಯಿಂದ ಅದೃಶ್ಯಪ್ಪ 15 ದಿನಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದರು. ಒಂದೆಡೆ ಸಾಲಗಾರರ ಕಿರಿಕಿರಿ, ಇನ್ನೊಂದೆಡೆ ಪತಿ ನಾಪತ್ತೆಯಾಗಿರುವುದರಿಂದ ಬೇಸತ್ತ ಸರಸ್ವತಿ, ಜಿಲ್ಲಾಧಿಕಾರಿಗಳ ಭೇಟಿಗಾಗಿ ಆಗಮಿಸಿದ್ದರು.
ಈ ವೇಳೆ ಮಕ್ಕಳಿಗೆ ಫಿನೈಲ್ ಕುಡಿಸಿದ್ದ ಸರಸ್ವತಿ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ಕು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಸದ್ಯ ನಾಲ್ವರ ಆರೋಗ್ಯ ಸ್ಥಿರವಾಗಿದೆ.