ಬಿಜೆಪಿಯನ್ನು ನಾನಾಗಿಯೇ ಬಿಟ್ಟಿಲ್ಲ, ನನ್ನನ್ನು ಬಿಜೆಪಿ ಪಕ್ಷದಿಂದ ಬಲವಂತವಾಗಿ ಹೊರಹಾಕಿದ್ದಾರೆ: ಶಾಸಕ ಸ್ಥಾನಕ್ಕೆ, ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೆಟ್ಟರ್
ಶಿರಸಿ: BJP ಶಾಸಕ ಸ್ಥಾನ ಮತ್ತು ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿಯನ್ನು ನಾನಾಗಿಯೇ ಬಿಟ್ಟಿಲ್ಲ, ನನ್ನನ್ನು ಬಿಜೆಪಿ ಪಕ್ಷದಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಶೆಟ್ಟರ್, ಹುಬ್ಬಳ್ಳಿಗೆ ಹೋಗಿ ನನ್ನ ಬೆಂಬಲಿಗರು, ಕಾರ್ಯಕರ್ತರ ಜೊತೆ ಸಭೆ ನಡೆಸಿ, ಅವರು ಏನು ಹೇಳುತ್ತಾರೋ ಅದೇ ರೀತಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ರಾಜ್ಯ ಬಿಜೆಪಿಯಿಯಲ್ಲಿ ಮೂಲ ಬಿಜೆಪಿಗರನ್ನು ಪಕ್ಷದಿಂದ ಹೊರಹಾಕುವ ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಕೆಲವರಿಂದಾಗಿ ಬಿಜೆಪಿ ಪಕ್ಷ ಇಂದು ಹಾಳಾಗುತ್ತಿದೆ, ಕೆಲವರ ಷಡ್ಯಂತ್ರದಿಂದ ನಾಯಕರುಗಳಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದಾಗ ಹೊಸ ಸಚಿವ ಸಂಪುಟದಲ್ಲಿ ನನಗೆ ಮಂತ್ರಿ ಸ್ಥಾನ ಬೇಡವೆಂದು 2 ವರ್ಷ ಶಾಸಕನಾಗಿ ಕ್ಷೇತ್ರದಲ್ಲಿ ಅತ್ಯಂತ ಶಾಂತವಾಗಿ ಕೆಲಸ ಮಾಡುತ್ತಾ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆ. ನಾನು ರೌಡಿ ಶೀಟರ್ ಅಲ್ಲ, ನನ್ನ ವಿರುದ್ಧ ಯಾವುದೇ ಸಿಡಿ ಹಗರಣ ಕೇಸುಗಳೂ ಕೂಡ ಇಲ್ಲ, ನನ್ನ ಮೇಲೆ ಯಾವುದೇ ಇನ್ನಿತರ ಕೇಸುಗಳಿಲ್ಲ, ನನಗೆ 75 ವರ್ಷ ವಯಸ್ಸೂ ಆಗಿಲ್ಲ, ಹಾಗಿದ್ದರೂ ನನಗೆ ಆ ಬಾರಿ ಟಿಕೆಟ್ ಏಕೆ ನಿರಾಕರಿಸಿದರು ಎಂಬುದು ಪ್ರಶ್ನೆಯಾಗಿದೆ ಎಂದರು.