ಕಾಂಗ್ರೆಸ್ ಜನರಿಗೆ ನೀಡಿರುವ 'ಗ್ಯಾರಂಟಿ' ಅನುಷ್ಠಾನಗೊಂಡರೆ ಕೆಪಿಸಿಸಿ ಕಚೇರಿ ಮುಂದೆ ತಲೆ ಬೋಳಿಸಿ ಅರ್ಧ ದಿನ ಕುಳಿತುಕೊಳ್ಳುವೆ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ 5 ವರ್ಷಗಳ ಅವಧಿಯಲ್ಲಿ ಯಥಾವತ್ತಾಗಿ ಅನುಷ್ಠಾನಗೊಳಿಸಿದರೆ 2028ರ ಮೇ ತಿಂಗಳಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ನಾನು ತಲೆ ಬೋಳಿಸಿ ಅರ್ಧ ದಿನ ಕುಳಿತುಕೊಳ್ಳುವುದಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸವಾಲು ಹಾಕಿದ್ದಾರೆ.
ರವಿವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. ಈ ಕಾರಣದಿಂದಲೇ ಕೈಯ್ಯಲ್ಲಾಗದ್ದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಹಿ ಇರುವ ಚೆಕ್ ಮಾದರಿಯ ಕಾರ್ಡ್‌ಗಳನ್ನು ನೀಡುತ್ತಿದೆ. ಈ ಮೂಲಕ ಕಾಂಗ್ರೆಸ್ ಜನರನ್ನು ಮೋಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಈ ಯೋಜನೆಯನ್ನು ಯಾವುದೇ ಸರಕಾರ ಕೂಡ ಕೊಡಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿ ಮರಳು ಮಾಡುತ್ತಿದೆ. ಇದು ಕಾಂಗ್ರಸ್‌ಗೆ ಶೋಭೆ ತರುವುದಿಲ್ಲ. ಮತ ಗಳಿಸುವುದಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತಿದೆ. ಆದರೆ ಮತದಾರರು ಪ್ರಬುದ್ಧರಾಗಿದ್ದಾರೆ. ಒಂದು ಮನೆಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂ. ಸೌಲಭ್ಯ ಒದಗಿಸುವ ಭರವಸೆ ನೋಡಿ ಜನ ನಗುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ವಿರುದ್ಧ ಪತ್ರಿಕೆಯಲ್ಲಿ ಜಾಹೀರಾತು ನೀಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ? ಇವರ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರು ಇದೀಗ ಬೇಲ್‌ನಲ್ಲಿದ್ದಾರೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರು ಭ್ರಷ್ಟಾಚಾರ ಆರೋಪದಡಿಯಲ್ಲಿ ಜಾಮೀನಿನಲ್ಲಿ ಇದ್ದಾರೆ. ಇವರು ಈ ಬಗ್ಗೆ ದೇವರ ಮುಂದೆ ನಿಂತು ಎದೆ ಮುಟ್ಟಿ ಹೇಳಲಿ ಎಂದು ಅವರು ತಿಳಿಸಿದರು.
ಪತ್ರಿಕಾಗೋಸ್ಟಿಯಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಶ್ರೀನಿಧಿ ಹೆಗ್ಡೆ, ಸಹವಕ್ತಾರ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.