ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ; ಹೇಳಿದ್ದೇನು...?
ಬೆಂಗಳೂರು: ನಾನು ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕೆಲ ನಾಯಕರ ಮೇಲೆ ಹೊಂದಾಣಿಕೆ ರಾಜಕಾರಣದ ಆರೋಪ ಹೊರಿಸಿದ್ದ ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ ಕಿಡಿಕಾರಿದರು. ನಾನು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನನಗೆ ಹೊಂದಾಣಿಕೆ ರಾಜಕಾರಣದ ಅವಶ್ಯಕತೆಯೂ ಇಲ್ಲ. ಬೇರೆ ಪಕ್ಷಗಳ ನಾಯಕರ ಭೇಟಿ ಮಾಡೋದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ಎಲ್ಲ ಪಕ್ಷಗಳಲ್ಲೂ ಎಲ್ಲರಿಗೂ ಸ್ನೇಹಿತರಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಯಾವುದೇ ಪ್ರಕರಣದಲ್ಲಿ ತನಿಖೆ ಮಾಡಿಲ್ಲ ಎಂಬ ಪ್ರತಾಪ್ ಸಿಂಹ ಆರೋಪಕ್ಕೆ, ಪ್ರತಾಪ್ ಸಿಂಹ ಅವರಿಗೆ ಸಂಪೂರ್ಣ ಮಾಹಿತಿ ಇದ್ದಂಗಿಲ್ಲ. ಸಿದ್ದರಾಮಯ್ಯ ವಿರುದ್ಧ ಐದು ಕೇಸ್‌ಗಳನ್ನು ಫೈಲ್ ಮಾಡಿ ದೂರು ದಾಖಲಿಸಿದ್ದೆವು ಎಂದು ತಿರುಗೇಟು ನೀಡಿದರು.
ಶಾಮನೂರು ನಮ್ಮ ಸಂಬಂಧಿ. ಅವರ ಮನೆಯಲ್ಲಿ ಕಾರ್ಯಕ್ರಮ ಇತ್ತು, ನಾನೂ ಹೋಗಿದ್ದೆ. ದೇವೇಗೌಡರು, ದೇಶಪಾಂಡೆಯವರನ್ನು ಭೇಟಿ ಆಗಿದ್ದೆ. ಇದೆಲ್ಲ ಸಹಜ, ಸಾಮಾಜಿಕವಾಗಿ, ವೈಯಕ್ತಿಕವಾಗಿ ಬೇರೆ ಪಕ್ಷದವರ ಭೇಟಿ ಸಾಮಾನ್ಯ ಎಂದರು.
ಪ್ರತಾಪ್ ಸಿಂಹಗೂ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಇದನ್ನ ದೊಡ್ಡ ವಿಷಯ ಮಾಡುವ ಅಗತ್ಯ ಇಲ್ಲ ಎಂದು ಹೇಳಿದರು.
ಬಿಜೆಪಿ ಕೆಲ ನಾಯಕರು ಕಾಂಗ್ರೆಸ್ ಜೊತೆಗೆ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ದ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿತ್ತು. ಆದರೆ ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ದವೇ ಪ್ರತಾಪ್ ಸಿಂಹ ಹರಿಹಾಯ್ದಿದ್ದರು.