'ಟಾರ್ಗೆಟ್ ಲಿಂಗಾಯಿತ' ಕಾರ್ಯಾಚರಣೆ; ಬಿಜೆಪಿ ಗರ್ಭಗುಡಿಯೊಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ- ಸಂತೋಷರ ಮುಂದಿನ ಟಾರ್ಗೆಟ್!: ಕಾಂಗ್ರೆಸ್ ಟೀಕೆ
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಮತ್ತೆ ದಾಳಿ ಮುಂದುವರಿಸಿದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ಸಂಸದ ಪ್ರತಾಪ ಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಹೊಂದಾಣಿಕೆ ರಾಜಕೀಯ ಜೀವಮಾನದಲ್ಲಿ ಮಾಡಿಲ್ಲ ಎಂದು ಹೇಳಿದ್ದ ಬಸವರಾಜ ಬೊಮ್ಮಾಯಿಗೂ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸಿದರೆ 'ಟಾರ್ಗೆಟ್ ಲಿಂಗಾಯತ' ಕಾರ್ಯಾಚರಣೆ ಪೂರ್ಣಗೊಳಿಸಿದಂತಾಗುತ್ತದೆ! ಎಂದು ವಾಗ್ದಾಳಿ ನಡೆಸಿದೆ.
ಪ್ರಹ್ಲಾದ ಜೋಶಿ, ಬಿ.ಎಲ್ ಸಂತೋಷ್ ಅವರು ಪ್ರತಾಪ್ ಸಿಂಹ ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು ಬೊಮ್ಮಾಯಿ ಎದೆಗೆ ತಗುಲಿದೆ. ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್ ಎಂದಿದೆ.
ಈ ನಡುವೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಾಪ ಸಿಂಹ ಹೇಳಿಕೆಯನ್ನು ವಿರೋಧ ಮಾಡಿದ್ದರು. ನನ್ನ ರಾಜಕೀಯ ಇತಿಹಾಸದಲ್ಲಿ ಯಾರ ಜೊತೆಗೂ ಹೊಂದಾಣಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.