ಶೋಭಾ ವಿರುದ್ದ ಚಿಕ್ಕಮಗಳೂರಿನಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಯಡಿಯೂರಪ್ಪ ಆರೋಪ: ಸಿಟಿ ರವಿ ಏನು ಹೇಳಿದ್ದಾರೆ ನೋಡಿ...
ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಚಿಕ್ಕಮಗಳೂರಿನಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಬಿಜೆಪಿ ನಾಯಕ ಸಿಟಿ ರವಿ (CT Ravi) ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಹೀಗಾಗಿ ‘ಬಾಸ್ ಈಸ್ ಆಲ್ವೇಸ್ ರೈಟ್’. ನಾನು ಟಿಕೆಟ್ ಕೇಳಿಲ್ಲ ಎಂಬುದನ್ನು ಹತ್ತಾರು ಬಾರಿ ಹೇಳಿದ್ದೇನೆ. ನನಗೆ ಗೊತ್ತಿರುವುದು ಪಕ್ಷ ನಿಷ್ಠೆ ಮತ್ತು ಪರಿಶ್ರಮ ಮಾತ್ರ ಎಂದು ಸಿಟಿ ರವಿ ಹೇಳಿದ್ದಾರೆ.
‘ನಮ್ಮ ಗುರಿ ಒಂದೇ, ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ನನ್ನ 36 ವರ್ಷದ ರಾಜಕೀಯ ಜೀವನದಲ್ಲಿ ಪಕ್ಷನಿಷ್ಠೆ ಪ್ರಶ್ನಾರ್ಥಕ ಚಿಹ್ನೆಯಾಗಲು ಅವಕಾಶ ಕೊಟ್ಟಿಲ್ಲ. ಪಂಚಾಯತ್ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಗೆಲ್ಲಿಸಬೇಕು ಅಂತ ಹೋರಾಟ ಮಾಡಿದ್ದೇನೆ. ಯಾರು ಯಾರು ಒಂದೊಂದು ಚುನಾವಣೆಯಲ್ಲಿ ಒಂದೊಂದು ತರಹ ವರ್ತನೆ ಮಾಡಿರುತ್ತಾರೋ ಅವರಿಗೆ ಇದು ಅನ್ವಯ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.
ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೆನೆ. ಚಿಕ್ಕಮಗಳೂರು ಸೇರಿದಂತೆ 28 ಕ್ಷೇತ್ರವನ್ನೂ ಗೆಲ್ಲುತ್ತೇವೆ ಎಂದು ರವಿ ಭರವಸೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಿ ಖರ್ಚಿನಲ್ಲಿ ಸಂವಿಧಾನ ಜಾಗೃತಿ ದಿನ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ, ಅದರಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಮಾತನಾಡಿದ್ದು ಕಡಿಮೆ. ಪ್ರಧಾನಿ ಮೋದಿಯನ್ನು ಟೀಕಿಸಿ, ಸುಳ್ಳು ಆರೋಪ ಹೊರಿಸಿ, ತಪ್ಪು ಭಾವನೆ ಬರುವಂತೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಆಗುತ್ತದೆ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದವರು. ನಂತರ ಎರಡೂ ಬಾರಿ ಬಹುಮತ ಪಡೆದು ಜನರಿಂದ ಆಯ್ಕೆಯಾದ ಪ್ರಧಾನಮಂತ್ರಿ. ಅವರನ್ನು ಸರ್ಕಾರಿ ಕಾರ್ಯದಲ್ಲಿ ಅಪಮಾನ ಮಾಡಿದ್ದೇ ತಪ್ಪು. ಮೋದಿ ಅವರನ್ನು ಟೀಕಿಸಲು ಕಾಂಗ್ರೆಸ್ನವರಿಗೆ ವೇದಿಕೆ ಬೇರೆ ಇದೆ. ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂವಿಧಾನಕ್ಕೆ ಅಪಮಾನ ಆಗುವ ಕೆಲಸವನ್ನು ಸರ್ಕಾರ ಮಾಡಿದೆ. ಅಲ್ಲಿ ಮಾತನಾಡಿದ ಎಲ್ಲಾ ಮುಖಂಡರು ಪ್ರಧಾನಿಯವರನ್ನು ಟೀಕೆ ಮಾಡಿ ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಕಾರ್ಯಕ್ರಮ ಆಯೋಜಕರು ಕ್ಷಮೆ ಕೇಳಬೇಕು ಎಂದು ರವಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಅದರ ನಾಯಕರು ಸಂವಿಧಾನ ದುರ್ಬಳಕೆ ಮಾಡಿದ್ದಾರೆ. ಈಗ ಏಕಾಏಕಿ ಸಂವಿಧಾನ ಬಗ್ಗೆ ನೆನಪಾಗಿದ್ದು ಅಂಬೇಡ್ಕರ್ ಮೇಲಿನ ಪ್ರೀತಿಯಿಂದ ಅಲ್ಲ. ಇಂದು ಅಂಬೇಡ್ಕರ್ ಪೋಟೋ ಬಳಸುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಸಂವಿಧಾನ ಗೌರವ ದಿನ ಅಂತ ಘೋಷಣೆ ಮಾಡಿದ್ದೇ ನಮ್ಮ ಪ್ರಧಾನಿ ಮೋದಿ ಎಂದು ರವಿ ಹೇಳಿದ್ದಾರೆ.