ಜೆಡಿಎಸ್ ಗೆ ಶಾಕ್ ನೀಡಿದ ಕಾಂಗ್ರೆಸ್; 'ಕೈ' ಹಿಡಿದ ಮಂಡ್ಯದ ಮೂವರು ಮಾಜಿ ಶಾಸಕರು; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಜೆಡಿಎಸ್ ಗೆ ಶಾಕ್ ನೀಡಿದ ಕಾಂಗ್ರೆಸ್; 'ಕೈ' ಹಿಡಿದ ಮಂಡ್ಯದ ಮೂವರು ಮಾಜಿ ಶಾಸಕರು; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಬೆಂಗಳೂರು: ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದಂತೆಯೇ ಮಂಡ್ಯ ಭಾಗದ ಜೆಡಿಎಸ್ ನ ಮಾಜಿ ಮೂವರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಂಕಷ್ಟ ಎದುರಾಗಿದೆ. 

ಮಾಜಿ ಎಂಎಲ್ ಸಿ ಮರಿ ತಿಬ್ಬೇಗೌಡ, ಮಾಜಿ ಶಾಸಕ ಎಂ. ಶ್ರೀನಿವಾಸ್, ಮಾಜಿ ಎಂಎಲ್ ಸಿ ಅಪ್ಪಾಜಿ ಗೌಡ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಮರಿತಿಬ್ಬೇಗೌಡಗೆ ಬಹಳ ದಿನಗಳಿಂದ ಗಾಳ ಹಾಕ್ತಾ ಇದ್ದೆ, ಆದರೆ ಸಿಕ್ಕಿರಲಿಲ್ಲ. ಇವಾಗ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿ ಎಸ್ ಗೆ ದೊಡ್ಡ ಅಡಿಪಾಯ ಆಗಿದ್ದವರು ಮರಿತಿಬ್ಬೇಗೌಡರು ಎಂದರು.

ಜನತಾ ದಳ ಗೊಂದಲದ ಗೂಡಾಗಿದೆ. ಅದಕ್ಕೆ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಎಂ ಶ್ರೀನಿವಾಸ್ ಆರೋಗ್ಯ ಸರಿ‌ ಇಲ್ಲದ ಕಾರಣದಿಂದ ಪತ್ರ ಬರೆದು ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಪಕ್ಷ ಸೇರ್ಪಡೆಯಾದ ಮರಿ ತಿಬ್ಬೇಗೌಡ ಮಾತನಾಡಿ, ಮೈಸೂರು ಚಾಮರಾಜನಗರ, ಹಾಸನ ಮಂಡ್ಯ ಜಿಲ್ಲೆಗಳಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆ ಆಗಿದ್ದೇನೆ. ಶಿಕ್ಷಕ ಸಮುದಾಯದ ಹಾಗೂ ಜನರ ಹಿತದೃಷ್ಟಿಯಿಂದ ಜಾತ್ಯತೀತ ನಿಲುವಿನೊಂದಿಗೆ ಕೆಲಸ ಮಾಡಿದ್ದೇನೆ‌ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಂಡ್ಯದಿಂದ ಬೇಡ ಎಂದಿದ್ದೆ. ಜೆಡಿಎಸ್ ಕುಟುಂಬದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಲಾಗ್ತಿದೆ. ಇದನ್ನು ಜೆಡಿಎಸ್ ಸಭೆಯಲ್ಲಿ ಉಲ್ಲೇಖ ಮಾಡಿದ್ದೆ. ರೈತರ ಹೆಸರು ಹೇಳಿಕೊಂಡು ಬರುವ ಜೆಡಿಎಸ್ ನಾಯಕರು ರೈತರ ವಿಚಾರ ಬಂದಾಗ ವಂಚನೆ ಮಾಡಿದ್ದಾರೆ. ಇದಕ್ಕಾಗಿ ಅಂತರ ಕಾಯ್ದಕೊಂಡಿದ್ದೆ ಎಂದು ತಿಳಿಸಿದರು.

ಜೆಡಿಎಸ್ ನಲ್ಲಿ ನಿಷ್ಠಾವಂತರಿಗೆ, ಪಕ್ಷಕ್ಕೆ ದುಡಿದವರಿಗೆ ಬೆಂಬಲ ಇಲ್ಲ. ಸಂವಿಧಾನ ನಾಶ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಎಚ್ ಡಿ ದೇವೇಗೌಡರರು ಹಾಗೂ ಕುಮಾರಸ್ವಾಮಿ ಅಭಿವೃದ್ಧಿ ವಿಚಾರವಾಗಿ ಮಂಡ್ಯ ಜಿಲ್ಲೆಯ ಜನರಿಗೆ ಸುಳ್ಳು ಹೇಳಿಕೊಂಡು ಬಂದಿದ್ದಾರೆ . ಮಂಡ್ಯ ಜಿಲ್ಲೆ ಹಾಗೂ ಒಕ್ಕಲಿಗ ಸಮಾಜಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಜೆಡಿ ಎಸ್ ನಾಯಕರು ಅಭಿಪ್ರಾಯ ಮೂಡಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ರಣದೀಪ್ ಸಿಂಗ್ ಸುರ್ಜೇವಾಲ, ಬಿಕೆ ಹರಿಪ್ರಸಾದ್, ಸಲೀಂ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯದಲ್ಲಿ ಚುನಾವಣಾ ತಯಾರಿ ನಡೆಸುತ್ತಿದೆ. ಜೆಡಿಎಸ್ ಮತ್ತು ಹಾಲಿ ಸಂಸದ ಸುಮಲತಾ ಇಬ್ಬರೂ ಈ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವುದರಿಂದ ಟಿಕೆಟ್ ಘೋಷಣೆ ವಿಳಂಬವಾಗುತ್ತಿದೆ. ಇದೇ ಹೊತ್ತಿನಲ್ಲಿ ಮೂವರು ಮುಖಂಡರು ಕಾಂಗ್ರಸ್ ಗೆ ಸೇರ್ಪಡೆಯಾಗುವ ಮೂಲಕ ಜೆಡಿಎಸ್ ಗೆ ಶಾಕ್ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article