ನನ್ನ ವಿರುದ್ಧ ಪಿತೂರಿಯಿಂದಾಗಿ ನಾನು ಏನೆಲ್ಲ ಕೆಲಸ ಮಾಡಿದ್ದೇನೆಂಬುದು ನಾಯಕರಿಗೂ, ಜನರಿಗೂ ಗೊತ್ತಾಗಿದೆ: ವಿರೋಧಿಗಳ ವಿರುದ್ಧ ಗುಡುಗಿದ ಶೋಭಾ ಕರಂದ್ಲಾಜೆ
ಬೆಳಗಾವಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ತಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕೆಲವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಇದರಿಂದ ನನಗೇನೂ ತೊಂದರೆ ಇಲ್ಲ. ಬದಲಾಗಿ ಒಳ್ಳೆಯದೇ ಅಗಿದೆ. ನಾನು ಏನೆಲ್ಲ ಕೆಲಸ ಮಾಡಿದ್ದೇನೆ ಎಂದು ನಾಯಕರಿಗೂ, ಜನರಿಗೂ ಗೊತ್ತಾಗಿದೆ' ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕ್ತಾರೆ. ನಮ್ಮ ಕೆಲಸಗಳನ್ನು ಗುರುತಿಸುತ್ತಾರೆ. ಶೋಭಾಗೆ ಏಕೆ ವಿರೋಧ ಮಾಡ್ತಿದ್ದಾರೆ ಎಂದು ಸತ್ಯ ಗೊತ್ತಾಗುತ್ತದೆ. ಇದರಿಂದ ನಾನೇನು, ನನ್ನ ವ್ಯಕ್ತಿತ್ವ ಏನೆಂದು ತಿಳಿಯಲಿದೆ' ಎಂದರು.
'ಬಿಜೆಪಿಯ ಬಹಳಷ್ಟು ಹಾಲಿ ಸಂಸದರಿಗೆ ಟಿಕೆಟ್ ತಪ್ಪುತ್ತದೆ ಎಂದು ನಮ್ಮ ನಾಯಕರು ಎಲ್ಲಿಯೂ ಹೇಳಿಲ್ಲ. ಇದು ಮಾಧ್ಯಮಗಳಲ್ಲಿ ಮಾತ್ರ ಹರಿದಾಡುತ್ತಿದೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೋ ಅವರಿಗೆ ಟಿಕೆಟ್ ಸಿಗುತ್ತದೆ. ಇದು ಬಿಜೆಪಿಯ ಸೂತ್ರ' ಎಂದು ಹೇಳಿದರು.
'ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಆಧಾರದ ಮೇಲೆಯೇ ಮತ ಕೇಳುತ್ತೇನೆ' ಎಂದರು.
'ಈ ಬಾರಿಯೂ ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ. 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಆದ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು ನಮ್ಮ ಶಕ್ತಿ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ ಪರಿಣಾಮ ಬೀರಲಿವೆ. ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿ ಅವರಿಗೆ ಇರುವ ದೂರದೃಷ್ಟಿ ಬಲ ತರಲಿದೆ' ಎಂದೂ ಹೇಳಿದರು.
'ಚುನಾವಣೆ ಬಂದ ಕಾರಣ ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಇಳಿಕೆ ಮಾಡಿಲ್ಲ. ಅನಿಲಗಳ ದರ ವ್ಯತ್ಯಾಸ ವಿದೇಶಿ ಮಾರುಕಟ್ಟೆ ಮೇಲೆ ನಿರ್ಧಾರವಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಇವುಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಹೀಗಾಗಿ ದರ ಏರಿಕೆ, ಇಳಿಕೆ ಸಹಜ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಈಗಾಗಲೇ ನಾವು ಶೇ.20ರಷ್ಟು ಎಥೆನಾಲ್ ಬಳಸಲು ಆರಂಭಿಸಿದ್ದೇವೆ. ಅದರ ಪ್ರಮಾಣ ಹೆಚ್ಚಾಗಲು ಪ್ರೋತ್ಸಾಹ ನೀಡುತ್ತಿದ್ದೇವೆ. ರಸಗೊಬ್ಬರಗಳಲ್ಲೂ ನಾವು ಸ್ವಾವಲಂಬಿ ಆಗಬೇಕಿದೆ. ಈ ದೃಷ್ಟಿಯಿಂದ ಪ್ರಧಾನಿ ಹಲವು ಯೋಜನೆ ಹಾಕಿಕೊಂಡಿದ್ದಾರೆ' ಎಂದರು.