ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ? ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪೆನ್ ಡ್ರೈವ್ ತೋರಿಸುವ ಕುಮಾರಸ್ವಾಮಿ ಅವರ ಹಳೆಯ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಈ ಪ್ರಶ್ನೆ ಕೇಳಿದೆ.
ಕುಮಾರಸ್ವಾಮಿಯವರೇ, ನೀವು ತೋರಿಸಿ ಜೇಬಿನೊಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ? ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ ಎಂದು ಪ್ರಶ್ನಿಸಿದೆ.
ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದೆ.
ಗೌರವದಿಂದ ಮಂಗಳಸೂತ್ರ ತೊಟ್ಟಿರುವ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದು ಯಾರು ಎಂದು ಕಣ್ಬಿಟ್ಟು ನೋಡಿ ಮೋದಿಯವರೇ.. ಹಾಸನ ಮೂಲದ ಬಿಜೆಪಿ ಬೆಂಬಲಿತ ಸಂಸದನಲ್ಲವೇ? ಇದು ಮಹಿಳೆಯರ ಮಂಗಳ ಸೂತ್ರದ ಪಾವಿತ್ರ್ಯತೆಗೆ ಕುತ್ತು ತಂದಿದ್ದು ಎಂದು ನಿಮಗೆ ಅನಿಸುವುದಿಲ್ಲವೇ? ನಿಮಗೆ ಮಹಿಳೆಯರ ಘನತೆ, ಮಂಗಳಸೂತ್ರದ ಪಾವಿತ್ರ್ಯತೆಯ ಬಗ್ಗೆ ನೈಜ ಕಾಳಜಿ ಇದ್ದಿದ್ದೇ ಆದರೆ ನಿಮ್ಮ ಮೈತ್ರಿಕೂಟದ ಕರ್ಮಕಾಂಡದ ಬಗ್ಗೆ ಕ್ಷಮೆ ಕೇಳಿ ಎಂದು ಇನ್ನೊಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.