ನೇಹಾ ಹತ್ಯೆ ವಿಚಾರದಲ್ಲಿ ಬಿಜೆಪಿಯಿಂದ ಮೊಸಳೆ ಕಣ್ಣೀರು; ಚುನಾವಣೆ ಮುಗಿದ ಮರುಕ್ಷಣವೇ ಅವರಿಗೆ ನೇಹಾ ಯಾರು ಎಂದೇ ಗೊತ್ತಿರುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ವಿಚಾರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ತುಂಬಾ ನಾಚಿಗೇಡಿತನದ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, " ಬಿಜೆಪಿಯವರು ಜಾಣ ಕುರುಡರು, ಜಾಣ ಕಿವುಡರು ಕೂಡ. ಅವರು ಬೇಕಾದಾಗ ಮೊಸಳೆ ಕಣ್ಣೀರು ಸುರಿಸ್ತಾರೆ. ಬೇಡವಾದಾಗ ಕಿವುಡತನ ಇದ್ದ ಹಾಗೇ ವರ್ತಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವರು ಹರಿಹಾಯ್ದರು. ಬಿಜೆಪಿಯವರು ಈ ಘಟನೆ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಅವರು ಪ್ರತಿಭಟನೆ ಮಾಡಲು ಹೊರಟಿರುವುದು ಚುನಾವಣೆ ಇರುವುದರಿಂದ. ಆದರೆ ಚುನಾವಣೆ ಮುಗಿದ ಮರುಕ್ಷಣವೇ ಅವರಿಗೆ ನೇಹಾ ಯಾರು ಎಂದೇ ಗೊತ್ತಿರುವುದಿಲ್ಲ " ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
" ನೇಹಾ ನಮ್ಮ ಸಮಾಜದ ಮಗಳು, ನಮ್ಮ ಮಗಳು ಇದ್ದಹಾಗೆ. ಹತ್ಯೆಯಾದ ತಕ್ಷಣವೇ ಖಂಡನೆ ಮಾಡಿದ್ದೇನೆ. ತಕ್ಷಣವೇ ನೇಹಾ ತಂದೆ - ತಾಯಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಬಂದಿದ್ದೇನೆ. ಅವಳು ನಿಮ್ಮ ಮಗಳಷ್ಟೇ ಅಲ್ಲ; ನಮ್ಮ ಸಮಾಜದ ಮಗಳು. ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿ ಸರ್ಕಾರದ ಕಡೆಯಿಂದ ಹೋಗಿ ಸಾಂತ್ವನ ಹೇಳಿ ಅತ್ಯಂತ ಕಠಿಣ ಶಬ್ಧಗಳಿಂದ ಘಟನೆಯನ್ನು ಖಂಡಿಸಿದ್ದೇನೆ " ಎಂದರು.
" ಬಿಜೆಪಿಯವರು ಇದರಲ್ಲು ಕೂಡ ರಾಜಕೀಯ ಮಾಡೋ ಪರಿಸ್ಥಿತಿ ಬಂದಿದೆ ಎಂದರೆ, ತುಂಬಾ ನಾಚಿಕೆಗೇಡು. ದೇಶದಲ್ಲಿ ಇಂತಹ ಪ್ರಕರಣಗಳು ಎಷ್ಟೆಲ್ಲ ಆಗಿವೆ. ಈ ಬಗ್ಗೆ ಅವರ ನಿಲುವೇನು? ಎನ್ನುವುದನ್ನು ಸ್ಪಷ್ಟಪಡಿಸಬೇಕು. ನಮ್ಮ ಮಗಳು ಆಗಬಾರದಿತ್ತು; ಆಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಿಸುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿಯವರು ಬೇಕಾದಾಗ ಮಾತ್ರ ಖಂಡನೆ ಮಾಡೋದಾ? " ಎಂದು ಪ್ರಶ್ನಿಸಿದ ಸಚಿವರು, ಇದಕ್ಕೆಲ್ಲ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.