ದ್ವೇಷದ ವಿರುದ್ಧ, ಬದಲಾವಣೆಗೆ ಮತ ನೀಡಿದ್ದೇನೆ: ನಟ ಪ್ರಕಾಶ್ ರಾಜ್
ಬೆಂಗಳೂರು: ಬದಲಾವಣೆಗೆ ಮತ ನೀಡಿದ್ದೇನೆ. ದ್ವೇಷದ ವಿರುದ್ಧ ಮತ ನೀಡಿದ್ದೇನೆ. ಸಂಸತ್ತಿನಲ್ಲಿ ನನ್ನ ದನಿಯಾಗಬಲ್ಲರೆಂದು ನಾನು ನಂಬುವ ಪ್ರತಿನಿಧಿಗೆ ನಾನು ಮತ ಹಾಕಿದ್ದೇನೆಂದು ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ತಮ್ಮ ಮತ ಹಕ್ಕು ಚಲಾಯಿಸಿರುವ ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದು. ತಮ್ಮ ಅಬಿಮಾನಿಗಳು ಮತ್ತು ಫಾಲೋವರ್ಸ್‌ಗೆ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ವೀಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ ಅವರು ನಾನು ಮತದಾನ ಮಾಡಿದ್ದೇನೆ. ದಯವಿಟ್ಟು ಹೋಗಿ ಮತದಾನ ಮಾಡಿ #ಜಸ್ಟ್‌ಆಸ್ಕಿಂಗ್ #ಸೇವ್‌ಡೆಮಾಕ್ರೆಸಿಸೇವ್‌ಇಂಡಿಯಾ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಮತ ಚಲಾಯಿಸಿದ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಪ್ರಕಾಶ್ ರಾಜ್ ಅವರು, ನನ್ನ ಮತ ನನ್ನ ಹಕ್ಕಿಗೆ ಸಂಬಂಧಿಸಿದೆ, ಯಾರು ನನ್ನನ್ನು ಪ್ರತಿನಿಧಿಸಬೇಕೆಂದು, ಯಾರು ಸಂಸತ್ತಿನಲ್ಲಿ ನನ್ನ ದನಿಯಾಗಬೇಕೆಂದು ಆರಿಸುವ ನನ್ನ ಅಧಿಕಾರವಿದು. ಕಳೆದೊಂದು ದಶಕದಲ್ಲಿ ನಾವು ನೋಡಿರುವ ದ್ವೇಷ ಮತ್ತು ವಿಭಜನಾತ್ಮಕ ರಾಜಕಾರಣದಿಂದಾಗಿ ನೀವು ನಂಬಿಕೆಯಿರಿಸಿರುವ ಅಭ್ಯರ್ಥಿಗೆ ಮತ ನೀಡುವುದು ಅಗತ್ಯ. ನಾನು ನಂಬಿಕೆ ಇರಿಸಿದ ಅಭ್ಯರ್ಥಿಗೆ ಹಾಗು ಅವರು ತಂದ ಪ್ರಣಾಳಿಕೆಗೆ ಮತ್ತು ಬದಲಾವಣೆಗೆ ಮತ ನೀಡಿದ್ದೇನೆ ಎಂದು ಹೇಳಿದ್ದಾರೆ.