ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ: 3 ದಿನಗಳೊಳಗೆ ವರದಿ ನೀಡುವಂತೆ ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗ; ಆರೋಪಿಯನ್ನು ಬಂಧಿಸುವಂತೆ ಒತ್ತಾಯ
ನವದೆಹಲಿ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.
ಈ ಸಂಬಂಧ ಕರ್ನಾಟಕ ಡಿಜಿಪಿಗೆ ಪತ್ರ ಬರೆದಿರುವ ಎನ್‌ಸಿಡಬ್ಲ್ಯೂ, ಪ್ರಜ್ವಲ್ ರೇವಣ್ಣ ಅವರು ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.
ದೇಶದಿಂದ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕರ್ನಾಟಕ ಪೊಲೀಸರಿಗೆ ಒತ್ತಾಯಿಸಿದೆ.
"ಆಯೋಗವು ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಘಟನೆಯಿಂದ ತೀವ್ರ ವಿಚಲಿತವಾಗಿರುವುದಾಗಿ" ಎನ್‌ಸಿಡಬ್ಲ್ಯು ಪತ್ರದಲ್ಲಿ ಹೇಳಿದೆ.
"ಇಂತಹ ಘಟನೆಗಳು ಮಹಿಳೆಯರ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಅವರ ವಿರುದ್ಧ ಅಗೌರವ ಮತ್ತು ಹಿಂಸೆಯ ಸಂಸ್ಕೃತಿಯನ್ನು ಬೆಳೆಸುತ್ತವೆ. ದೇಶದಿಂದ ಪರಾರಿಯಾಗಿರುವ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಸಂಬಂಧಪಟ್ಟ ಪೊಲೀಸ್ ಪ್ರಾಧಿಕಾರಿಗಳು ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ಮೂರು ದಿನಗಳಲ್ಲಿ ತನಗೆ ಸಲ್ಲಿಸಬೇಕು ಎಂದು ಆಯೋಗ ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.