ಮಹಿಳೆಯ ಅಪಹರಣ ಆರೋಪ;  ಎಚ್.ಡಿ.ರೇವಣ್ಣ ಬಂಧನ

ಮಹಿಳೆಯ ಅಪಹರಣ ಆರೋಪ; ಎಚ್.ಡಿ.ರೇವಣ್ಣ ಬಂಧನ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್‌ ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳ್ಳುತ್ತಿದ್ದಂತೆ ಹೆಚ್.ಡಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿತ್ತು. ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಆಗಮಿಸಿದ್ದರು.

ದೇವೇಗೌಡರ ಮನೆಯಲ್ಲಿ ರೇವಣ್ಣ ಅವರು ಇರಬಹುದು ಎಂದು ಶಂಕಿಸಿರುವ ಅಧಿಕಾರಿಗಳು ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲಿನಲ್ಲಿ ನಿಂತುಕೊಂಡಿದ್ದರು. ಇನ್ನು ರೇವಣ್ಣ ಮನೆಯಿಂದ ಹೊರಬರುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರದ ಮನೆಯಲ್ಲಿಯೇ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು, ಕಚೇರಿಗೆ ಕರೆದೊಯ್ಯುತ್ತಿದ್ದಾರೆ.

‘ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಸಂತ್ರಸ್ತೆಯನ್ನು ರೇವಣ್ಣ ಹಾಗೂ ಇತರರು ಅಪಹರಣ ಮಾಡಿದ್ದರು. ಈ ಮೂಲಕ ಸಂತ್ರಸ್ತೆಯನ್ನು ಬೆದರಿಸಲು ಯತ್ನಿಸಿದ್ದರು. ಇದೇ ಕಾರಣಕ್ಕೆ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಚೇರಿಗೆ ಕರೆದೊಯ್ದು, ಬಂಧನದ ಕಾನೂನು ಪ್ರಕ್ರಿಯೆ ನಡೆಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಆರೋಪಿಯನ್ನು ಕಚೇರಿಯಿಂದ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಾದ ನಂತರ, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article