ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ; ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ: ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಆಗ್ರಹ
ಉಡುಪಿ: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರು ಕೂಡ ಕೇಂದ್ರ ಶಿಕ್ಷಣ ಸಚಿವರು ಹಗರಣವಾಗಿಲ್ಲ ಎನ್ನುತ್ತಿರುವುದು ನಾಚಿಕೆಗೇಡಿತನ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಶಿಕ್ಷಣ ಸಚಿವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ತಾಹೀರ್ ಹುಸೇನ್ ಆಗ್ರಹಿಸಿದರು.
ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಚುನಾವಣೆಯ ಸಂದರ್ಭದಲ್ಲಿ ಫಲಿತಾಂಶ ಬಿಟ್ಟು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ವರದಿಗಳ ಪ್ರಕಾರ ಮೂವತ್ತು ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ. ಆದರೂ ಸರಕಾರಕ್ಕೆ ಒಂದು ಚೂರು ಮಾನ ಮಾರ್ಯದೆ ಇಲ್ಲ. ಪಿಯುಸಿ ಫಲಿತಾಂಶದಲ್ಲಿ ಉತ್ತೀರಣರಾಗದವರು ನೀಟ್ ರ‌್ಯಾಂಕ್ ಪಡೆಯುವುದು ಜನರ, ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಸಮೀರ್ ಪಾಶ ಮಾತನಾಡಿ, ಕಳೆದ ಏಳು ವರ್ಷದಲ್ಲಿ ವಿವಿಧ ಪರೀಕ್ಷೆಗಳ 70 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರತಿ ಬಾರಿ ಪೇಪರ್ ಲೀಕ್ ಆಗುತ್ತಿದ್ದರೂ ಸರಕಾರ ತಡೆಯುವಲ್ಲಿ ವಿಫಲವಾಗಿದೆ ಎಂದರು.
SIO ರಾಜ್ಯ ಕಾರ್ಯದರ್ಶಿ ಅಫ್ವಾನ್ ಬಿ ಹೂಡೆ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಐ.ಓ ಉಡುಪಿ ಜಿಲ್ಲಾಧ್ಯಕ್ಷರಾದ ಆಯಾನ್ ಮಲ್ಪೆ, ಕ್ಯಾಂಪಸ್ ಕಾರ್ಯದರ್ಶಿ ಔಸಾಫ್ ಹೂಡೆ, ಮುಝೈನ್ ಆದಿ ಉಡುಪಿ, ನಿಫಾಲ್ ಕಿದಿಯೂರು, ನಿಹಾಲ್ ಕಿದಿಯೂರು, ಎಪಿಸಿಆರ್ ಹುಸೇನ್ ಕೋಡಿಬೆಂಗ್ರೆ, ರಿಝ್ವಾನ್, ಸಫಾನ್ ಮಲ್ಪೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮೀರ್ ತೀರ್ಥಹಳ್ಳಿ ನಿರೂಪಿಸಿ ವಂದಿಸಿದರು.