ಮೊದಲ ಮಳೆಗೆ ಕಿತ್ತುಹೋದ ಬ್ರಹ್ಮಗಿರಿ- ಅಜ್ಜರಕಾಡು ರಸ್ತೆ; ಮೂರು ತಿಂಗಳ ಹಿಂದೆಯಷ್ಟೇ ಡಾಂಬರೀಕರಣಗೊಂಡ ರಸ್ತೆಯಲ್ಲಿ ಹೊಂಡ ಗುಂಡಿ
ಉಡುಪಿ: ಮೂರು ತಿಂಗಳ ಹಿಂದೆಯಷ್ಟೇ ಡಾಂಬರೀಕರಣಗೊಂಡಿದ್ದ ಬ್ರಹ್ಮಗಿರಿ ಸರ್ಕಲ್ ನಿಂದ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯವರೆಗಿನ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಮೂರು ತಿಂಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆಯು ಮೊದಲ ಮಳೆಗೆ ಸಂಪೂರ್ಣ ಕಿತ್ತು ಹೋಗಿದ್ದು, ಜಲ್ಲಿ ಮಿಶ್ರಣವು ರಸ್ತೆಯಲ್ಲಿ ಹರಡುಕೊಂಡಿದೆ. ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದು, ಸಾಕಷ್ಟು ಮಂದಿಗೆ ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒಳಕಾಡು ವಿನಂತಿಸಿದ್ದಾರೆ.
ಸಂಬಂಧ ಪಟ್ಟ ಇಲಾಖೆ ಶೀಘ್ರ ದುರಸ್ತಿ ಕಾರ್ಯ ಮಾಡಲಿ: ಸಮಾಜ ಸೇವಕ ಇಕ್ಬಾಲ್ ಮನ್ನಾ
ಸ್ಥಳೀಯರಾದ ಸಾಮಾಜಿಕ ಕಾರ್ಯಕರ್ತ ಎಂ.ಇಕ್ಬಾಲ್ ಮನ್ನಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿದ್ದು, "ಇಲ್ಲಿ ಬಹಳಷ್ಟು ಅಪಾರ್ಟ್ಮೆಂಟ್'ಗಳಿವೆ. ಸಾವಿರಾರು ಮಂದಿ ಪ್ರತಿ ನಿತ್ಯ ಸಂಚರಿಸುತ್ತಾರೆ. ಸಮೀಪದಲ್ಲೇ ಮಸೀದಿ ಇದೆ. ಕಾನ್ವೆಂಟ್ ಶಾಲೆಗೆ ಪ್ರತಿ ನಿತ್ಯ ನೂರಾರು ಈ ದಾರಿಯಿಂದ ಸಾಗುತ್ತಾರೆ. ಸರಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಪ್ರದೇಶದಿಂದ ನಡೆದುಕೊಂಡು ಹೋಗುತ್ತಾರೆ. ಎಲ್ಲರಿಗೂ ರಸ್ತೆ ಹಾಳಾದ ಕಾರಣ ಸಮಸ್ಯೆಯಾಗಿದೆ. ಸಂಬಂಧ ಪಟ್ಟ ಇಲಾಖೆ ಶೀಘ್ರ ದುರಸ್ತಿ ಕಾರ್ಯ ಮಾಡಲಿಯೆಂದು ಆಗ್ರಹಿಸಿದ್ದಾರೆ.