ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ನ್ಯಾಯಾಲಯದ ಆದೇಶದ ಮೇರೆಗೆ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ.

ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮುಡಾದಿಂದ ಹಂಚಿಕೆಯಾದ 14 ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಬಿದ್ದಿತ್ತು.

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ಆರಂಭಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 156 (3) ಅಡಿಯಲ್ಲಿ ತನಿಖೆಯನ್ನು ಕೈಗೆತ್ತಿಕೊಳ್ಳಲು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದ್ದು, ಇದು ಮ್ಯಾಜಿಸ್ಟ್ರೇಟ್‌ಗೆ ಅರಿಯಬಹುದಾದ ಅಪರಾಧದ ತನಿಖೆಗೆ ಆದೇಶಿಸುವ ಅಧಿಕಾರವನ್ನು ನೀಡುತ್ತದೆ. ಡಿಸೆಂಬರ್ ತಿಂಗಳ ಒಳಗೆ ತನಿಖಾ ವರದಿಯನ್ನು ಸಲ್ಲಿಸುತ್ತದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲಂ. 156(3) ರ ಅಡಿಯಲ್ಲಿ ಕಾರ್ಯನಿರ್ವಹಿಸುವುದು, ನ್ಯಾಯವ್ಯಾಪ್ತಿಯ ಪೊಲೀಸ್ ಅಂದರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮೈಸೂರು ಇವರಿಗೆ ಈ ಮೂಲಕ ಪ್ರಕರಣವನ್ನು ದಾಖಲಿಸಲು, ತನಿಖೆ ಮಾಡಲು ಮತ್ತು Cr. 173 ರ ಅಡಿಯಲ್ಲಿ ಪರಿಗಣಿಸಿದಂತೆ ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು.

ನ್ಯಾಯಾಲಯ ಸೂಚಿಸಿದ ಸೆಕ್ಷನ್​ಗಳಡಿ ಎಫ್ಐಆರ್ ದಾಖಲಾಗಿದೆ. ಸಿಆರ್​ಪಿಸಿ ಸೆಕ್ಷನ್ 156(3)ರ ಅಡಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120B, 166, 403, 406, 420, 426, 465, 468, 340, 351ರ ಅಡಿ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 9, 13ರ ಅಡಿ ಎಫ್​ಐಆರ್ ಆಗಿದೆ. ಇನ್ನು ಬೇನಾಮಿ ಆಸ್ತಿ ನಿಷೇಧ ಕಾಯ್ಡೆ ಸೆಕ್ಷನ್ 53 ಮತ್ತು 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿ ಎಫ್​ಐಆರ್ ದಾಖಲಿಸಲಾಗಿದೆ.

1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 9 ಮತ್ತು 13 ರ ಅಡಿಯಲ್ಲಿ ಮತ್ತು ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯಿದೆ, 1988 ರ ಸೆ.3, 53 ಮತ್ತು 54 ರ ಅಡಿಯಲ್ಲಿ ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ, 2011 ರ 3, 4 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ನ್ಯಾಯಾಲಯವು ಪಟ್ಟಿ ಮಾಡಿದೆ.

ಎ1 ಆರೋಪಿ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಅವರ ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಅವರ ಬಾಮೈದಾ ಮಲ್ಲಿಕಾರ್ಜುನ A 3, ಭೂಮಾಲಿಕ ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article